ಬೆಂಗಳೂರು: ಬೆಂಗಳೂರಿನಲ್ಲಿಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ ಹಾವಳಿ ತಡೆಗೆ ರಾಜ್ಯ ಸರಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಬೇಕೆಂದು ಕೋರಿ ಮಾಯಿಗೇಗೌಡ ಮತ್ತಿತರರು ಸಲ್ಲಿಸಿದ್ದ ಪಿಐಎಲ್ಗಳು ಸಿಜೆ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದವು.
ಅನಧಿಕೃತ ಜಾಹೀರಾತು ತಡೆಯುವ ಸಂಬಂಧ ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ವಿಫಲವಾಗಿರುವ ಬಿಬಿಎಂಪಿ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬಾರದು ಎಂದು ಹೈಕೋರ್ಟ್ ಖಾರವಾಗಿ ಪ್ರಶ್ನಿಸಿದೆ. ಅಲ್ಲದೆ, ಅಕ್ರಮ ಜಾಹೀರಾತು ಫಲಕ ಅಳವಡಿಕೆ ತಡೆಯಲು ಕೈಗೊಂಡಿರುವ ಎಲ್ಲ ಕ್ರಮಗಳ ಕುರಿತು ಸಮರ್ಪಕ ಮಾಹಿತಿ ನೀಡುವಂತೆ ಪಾಲಿಕೆಗೆ ನಿರ್ದೇಶನ ನೀಡಿದೆ.
ವಾದ- ಪ್ರತಿವಾದ ಆಲಿಸಿದ ಹಾಗೂ ದಾಖಲೆ ಪರಿಶೀಲಿಸಿದ ನ್ಯಾಯಪೀಠ, ‘ಅನಧಿಕೃತ ಜಾಹೀರಾತು ತೆರವಿಗೆ ಏನು ಕ್ರಮ ಕೈಗೊಂಡಿದ್ದೀರಿ? ನಿಮ್ಮ ಪ್ರಕಾರ ಕ್ರಮ ಎಂದರೆ ಮತ್ತಷ್ಟು ಅನಧಿಕೃತ ಜಾಹೀರಾತು ಫಲಕ, ಫ್ಲೆಕ್ಸ್, ಹೋರ್ಡಿಂಗ್ ಅಳವಡಿಕೆಗೆ ಅನುಮತಿ ನೀಡುವುದೇ ? ಎಂದು ಪ್ರಶ್ನಿಸಿತು. ಅಲ್ಲದೆ, ಇನ್ನೂ ಕಾಲಾವಕಾಶ ಬೇಕೆ ? ಹಾಗಿದ್ದರೆ ಇಷ್ಟು ದಿನ ಏನು ಮಾಡಿದ್ದೀರಿ,” ಎಂದೂ ಕೇಳಿತು.
‘ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ವಿಫಲವಾಗಿರುವ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಏಕೆ ಕ್ರಮ ಜರುಗಿಸಬಾರದು? ” ಎಂದು ಕೋರ್ಟ್ ಪ್ರಶ್ನಿಸಿತು. ಈ ನಡುವೆ, ‘ಅನಧಿಕೃತ ಜಾಹೀರಾತು ಫಲಕ ಅಳವಡಿಕೆ ತಡೆಯಲು ಕೈಗೊಂಡಿರುವ ಎಲ್ಲ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ಸೂಚಿಸಿ ವಿಚಾರಣೆಯನ್ನು ಆ.12 ಕ್ಕೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ‘ಪ್ರಕರಣ ಸಂಬಂಧ 2017 ರಿಂದ ಕಾಲಕಾಲಕ್ಕೆ ನ್ಯಾಯಾಲಯ ಆದೇಶ, ನಿರ್ದೇಶನಗಳನ್ನು ನೀಡುತ್ತಾ ಬಂದಿದೆ. ಇದೇ ಜ.8ರಂದು ವಿವರವಾದ ಆದೇಶ ಹೊರಡಿಸಿದೆ. ಆದರೂ ಪಾಲಿಕೆಯಾಗಲಿ, ಸರಕಾರವಾಗಲೀ ಯಾವುದೇ ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸಿಲ್ಲ’ ಎಂದು ನ್ಯಾಯಪೀಠದ ಗಮನಕ್ಕೆ ತಂದರು.