ರಾಮನಗರ: ಜೆಡಿಎಸ್ಗೆ (JDS) ಕೊಡುವ ಒಂದೊಂದು ವೋಟ್ ಕೂಡಾ ಕಾಂಗ್ರೆಸ್ನ (Congress) ಖಾತೆಗೆ ಹೋಗುತ್ತದೆ. ಕರ್ನಾಟಕದಲ್ಲಿ (Karnataka) ಅಸ್ಥಿರ ಸರ್ಕಾರ ಆಗಲಿದೆ. ಕರ್ನಾಟಕದಲ್ಲಿ ಅಸ್ಥಿರ ಸರ್ಕಾರಗಳ ನಾಟಕ ನೋಡಿದ್ದೀರಿ. ಕೇವಲ ಲೂಟಿ ಮಾಡಲು ಜಗಳಗಳಾಗಿವೆ ಹೊರತು ಅಭಿವೃದ್ಧಿ ಆಗಿಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಥಿರ ಸರ್ಕಾರಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರಣವಾಗಿದೆ. ಹೊರಗಿನ ನೋಟಕ್ಕಷ್ಟೇ ಎರಡು, ಒಳಗಡೆ ಎರಡೂ ಒಂದೇ ಆಗಿದೆ. ಎರಡೂ ಪಕ್ಷಗಳು ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತವೆ. ಜೆಡಿಎಸ್ ಅಂತೂ 15-20 ಸೀಟ್ ಸಿಕ್ಕರೂ ಕಿಂಗ್ ಮೇಕರ್ ಆಗುತ್ತೇವೆ ಎಂಬ ಕನಸು ಕಾಣುತ್ತದೆ. ಜೆಡಿಎಸ್ ಗೆದ್ದರೆ ಒಂದೇ ಕುಟುಂಬ ಉದ್ಧಾರ ಆಗುತ್ತದೆ. ಆದರೆ ಕರ್ನಾಟಕದ ಲಕ್ಷಾಂತರ ಕುಟುಂಬಕ್ಕೆ ನಷ್ಟವಾಗುತ್ತದೆ. ಹೀಗಾಗಿ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿಯ ಸರ್ಕಾರ ಬರಲಿದೆ ಎಂದರು.
ನರೇಂದ್ರ ಮೋದಿ ಭಾಷಣ ಆರಂಭದಲ್ಲಿ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಬಾಲಗಂಗಾಧರ ಸ್ವಾಮೀಜಿಯ ಜನ್ಮ ಇದೇ ಭೂಮಿಯಲ್ಲಿ ಆಗಿದೆ. ಎಲ್ಲಾ ಸಂತಶ್ರೇಷ್ಠರಿಗೆ ವಂದನೆ ಮಾಡುತ್ತೇನೆ ಎಂದರು. ಈ ಬಾರಿಯ ಚುನಾವಣೆ ಬಹಳ ವಿಶೇಷವಾಗಿದೆ. ವಿಕಾಸವನ್ನು ಕರ್ನಾಟಕವನ್ನು ದೇಶದ ನಂಬರ್ 1 ಮಾಡುವ ಚುನಾವಣೆಯಾಗಿದೆ. ಈ ಯಜ್ಞದ ಸಂಕಲ್ಪವನ್ನು ಬಿಜೆಪಿಯೇ ಪೂರ್ಣ ಮಾಡಬಹುದು ಎಂದರು.
ಕಾಂಗ್ರೆಸ್-ಜೆಡಿಎಸ್ ದೃಶ್ಯದಲ್ಲಿ ಕರ್ನಾಟಕ ಕೇವಲ ಒಂದು ಎಟಿಎಂ ಆಗಿದೆ. ಆದರೆ ಬಿಜೆಪಿಗೆ ದೇಶದ ವಿಕಾಸದ ಮಹತ್ವಪೂರ್ಣ ಅಭಿವೃದ್ಧಿಯ ಎಂಜಿನ್ ಆಗಿದೆ. ಕಾಂಗ್ರೆಸ್ ಬಂದರೆ ಕೆಲವರ ವಿಶೇಷ ಕುಟುಂಬಕ್ಕೆ ಮಾತ್ರ ಅನುಕೂಲ ಆಗಲಿದೆ. ಆದರೆ ಬಿಜೆಪಿಯಿಂದ ಎಲ್ಲರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಬಂದಾಗ ರಾಮನಗರ ಜಿಲ್ಲೆಯ 3 ಲಕ್ಷ ಜನರ ಬ್ಯಾಂಕ್ ಅಕೌಂಟ್ ತೆರೆಯಲಾಗುವುದು. ಬಿಜೆಪಿ ಸರ್ಕಾರ ಬಂದಾಗ ಜೀವನ್ ವೀಮಾ ತೆರೆಯಲಾಗುವುದು. ಅಟಲ್ ಪೆನ್ಶನ್ ತರಲಾಗುವುದು. ಮನೆ ನಿರ್ಮಾಣ ಆಗಲಿದೆ. ನೀರಿನ ವ್ಯವಸ್ಥೆ ಆಗಲಿದೆ. ಮಹಿಳೆಯರಿಗೆ ಶೌಚಾಲಯ, ಫ್ರೀ ಗ್ಯಾಸ್ ಕನೆಕ್ಷನ್ ಆಗಲಿದೆ. ಫ್ರೀ ರೇಷನ್ ಸಿಗಲಿದೆ. ಡಬಲ್ ಎಂಜಿನ್ ಸರ್ಕಾರ ಎಂದರೆ ಎಲ್ಲರ ಸರ್ಕಾರ, ಬಡವರ ಸೇವೆ ಮಾಡುವ ಸರ್ಕಾರ ಎಂದರು.