ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ರೂವಾರಿ ವಿಜಯ್ ಕಿರಗಂದೂರು, ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಅದೇ ರಘುತಾತ . ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಹಿಂದಿ ಹೇರಿಕೆಯ ವಿರುದ್ಧ ಕಥಾ ನಾಯಕಿ ಪ್ರತಿಭಟಿಸುವಂತಹ ಟೀಸರ್ ಇದಾಗಿದೆ.
ಹಿಂದಿ ಹೇರಿಕೆಯ ಕುರಿತಂತೆ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅದೇ ವಿಷಯವನ್ನೇ ಇಟ್ಟುಕೊಂಡು ಟೀಸರ್ ರೆಡಿ ಮಾಡಿದ್ದಾರೆ ನಿರ್ದೇಶಕರು. ಹಿಂದಿ ಹೇರಿಕೆಯ ವಿರುದ್ಧ ಕೀರ್ತಿ ಸುರೇಶ್ ಹೊಡೆದ ‘ಹಿಂದಿ ತೆರಿಯಾದ ಪೋಯ’ ಡೈಲಾಗ್ ಪಂಚಿಂಗ್ ಆಗಿದೆ. ಕೀರ್ತಿ ಸುರೇಶ್ ಅದ್ಭುತವಾಗಿಯೇ ನಟಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಮೊದಲ ತಮಿಳು ಚಿತ್ರವಿದು. ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಮೊದಲ ಟೀಸರ್ ಇಂದು ಬಿಡುಗಡೆಯಾಗಿದೆ. ಈ ಹಿಂದೆ, `ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ʻರಘುತಥಾʼ ಒಂದು ಮಹಿಳಾಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆ. ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದ್ದು, ಸಮಾಜದ ವಿರುದ್ದ ಸವಾಲೆಸೆಯುವ ಒಬ್ಬ ಗಟ್ಟಿಗಿತ್ತಿ ಯುವತಿಯ ಸುತ್ತ ಸುತ್ತುತ್ತದೆ. ತನ್ನ ಸಿದ್ಧಾಂತಗಳನ್ನು ಎತ್ತಿಹಿಡಿಯುವುದರ ಜೊತೆಗೆ, ಸಮಾಜದ ವಿರುದ್ಧ ಹೋರಾಡುತ್ತಲೇ,
ಆಕೆ ಹೇಗೆ ಎಲ್ಲರಿಗೂ ಸ್ಫೂರ್ತಿಯಾಗುತ್ತಾಳೆ ಎಂಬುದು ಚಿತ್ರದ ಕಥೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ಞಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ʻಜೈ ಭೀಮ್ʼ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ.