ಕಲಬುರಗಿ: ಕಾಂಗ್ರೆಸ್ನ (Congress) ಚುನಾವಣಾ ಪ್ರಣಾಳಿಕೆಯು ಮೊಹ್ಮದ್ ಅಲಿ ಜಿನ್ನಾ ಪ್ರಣಾಳಿಕೆ ಆಗಿದೆ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ (KS Eshwarappa) ವೇದಿಕೆಯಲ್ಲೇ ಕಾಂಗ್ರೆಸ್ ಪ್ರಣಾಳಿಕೆಯನ್ನು ಸುಟ್ಟು ಆಕ್ರೋಶ ಹೊರಹಾಕಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣಾ (Election) ಪ್ರಚಾರದಲ್ಲಿ ಬಜರಂಗದಳ ನಿಷೇಧ ವಿಚಾರವಾಗಿ ಕಿಡಿಕಾರಿದರು. ಯುವಜನರಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಬಜರಂಗದಳ ಮಾಡುತ್ತಿದೆ. ಗೋಹತ್ಯೆ ತಡೆಯಲು ಮುಂದಾಗಿರುವ ಬಜರಂಗದಳ ಬ್ಯಾನ್ ಮಾಡ್ತಿರಾ? ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ನಿಮ್ಮ ಎದುರೇ ಸುಟ್ಟು ಹಾಕುತ್ತಿದ್ದೇನೆ. ಕಾಂಗ್ರೆಸ್ ಬರೀ ಸುಳ್ಳಿನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಈ ಪ್ರಣಾಳಿಕೆಯಿಂದ ಯಾವ ಪ್ರಯೋಜನ ಇಲ್ಲ ಎಂದು ಕಿಡಿಕಾರಿದರು.
ಬಜರಂಗದಳ ದಳ ಬ್ಯಾನ್ ಮಾಡುತ್ತೇನೆ ಎಂದು ಹೇಳಿದ್ದಕ್ಕೆ ಹಿಂದೂಗಳಿಗೆ ನೋವಾಗಿದೆ. ಕಾಂಗ್ರೆಸ್ನ ಮನಸ್ಥಿತಿ ರಾಜ್ಯದ ಜನರಿಗೆ ಗೊತ್ತಾಗಿದೆ. ಎಲ್ಲಾ ಮುಸ್ಲಿಮರು ಒಂದೇ ಥರ ಅಲ್ಲ. ಕೆಲ ಮುಸ್ಲಿಮರು ಕಾಂಗ್ರೆಸ್ನ ವಿರುದ್ಧವಾಗಿದ್ದಾರೆ. ಇದು ಮುಸ್ಲಿಂ ಲೀಗ್ನ ಪ್ರಣಾಳಿಕೆ, ಮಹ್ಮದ್ ಅಲಿ ಜಿನ್ನಾನ ಪ್ರಣಾಳಿಕೆಯಾಗಿದೆ. ಬಜರಂಗದಳ ಬ್ಯಾನ್ ಮಾಡಿ ಮುಸ್ಲಿಮರ ತುಷ್ಟೀಕರಣ ಮಾಡಲು ಕಾಂಗ್ರೆಸ್ ಹೊರಟಿದೆ ಎಂದ ಅವರು, ಎಲ್ಲಾ ರಾಷ್ಟ್ರಭಕ್ತ ನಾಗರಿಕರು ರಾಷ್ಟ್ರದ್ರೋಹಿ ಪ್ರಣಾಳಿಕೆ ಬಹಿಷ್ಕರಿಸಲು ಮನವಿ ಮಾಡಿದರು.
ಬಜರಂಗದಳ ಅಂದರೆ ಆಂಜನೇಯ. ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದು ರಾವಣ. ಹೀಗಾಗಿ ಆಂಜನೇಯ ಬಾಲಕ್ಕೆ ಬೆಂಕಿ ಹಚ್ಚಲು ಮುಂದಾಗಿರುವ ಕಾಂಗ್ರೆಸ್ ದೇಶದೆಲ್ಲೆಡೆ ಸರ್ವನಾಶವಾಗಲಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿಪಕ್ಷ ಸ್ಥಾನ ಕೂಡ ಕಳೆದುಕೊಳ್ಳಲಿದೆ ಎಂದು ಗುಡುಗಿದರು.
ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಯಾಕೆ ಎನ್ನುವುದೇ ಕಾಂಗ್ರೆಸ್ಗೆ ಗೊತ್ತಿಲ್ಲ. ಧರ್ಮ, ಜಾತಿ ವಿಚಾರದಲ್ಲಿ ವಿಷಬೀಜ ಬಿತ್ತುವ ಸಂಘಟನೆಗಳ ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಒಕ್ಕಲಿಗರು ನನ್ನ ಹಿಂದೆ ಇದ್ದಾರೆ ಹಾಗಾಗಿ ನಾನು ಸಿಎಂ ಆಗ್ತಿನಿ ಅಂತಾ ಡಿಕೆಶಿ ಹೇಳ್ತಾರೆ. ಹಿಂದುಳಿದ ಸಮಾಜ ನನ್ನ ಹಿಂದೆ ಇದೆ ಇದರಿಂದ ನಾನು ಸಿಎಂ ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಸಮಾಜಗಳನ್ನು ಒಟ್ಟಿಗೆ ತಗೊಂಡು ಹೋಗುವ ಕೆಲಸ ಮಾಡಬೇಕು. ಆದರೆ ಜಾತಿ ಹೆಸರಲ್ಲಿ ಕಾಂಗ್ರೆಸ್ ಪಕ್ಷ ವಿಷಬೀಜ ಬಿತ್ತಿದೆ ಎಂದು ಟೀಕಿಸಿದರು.
ಮೊದಲು ಸಿದ್ದರಾಮಯ್ಯ, ಡಿಕೆಶಿ ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಈ ಬಗ್ಗೆ ದೂರು ಕೊಡುವ ಅವಶ್ಯಕತೆ ಇಲ್ಲ. ಪಿಎಎಫ್ಐ ಸಂಘಟನೆ ಗೋಹತ್ಯೆ ಮಾಡುತ್ತಿದೆ. ಗೋಹತ್ಯೆ ತಡೆಯಲು ಹೋದ ಬಜರಂಗದಳ ಕಾರ್ಯಕರ್ತರ ಕೊಲೆ ಆಗಿದೆ. ಪಿಎಎಫ್ಐ ಸಂಘಟನೆ ಮೇಲಿದ್ದ 123 ಕೇಸ್ ವಾಪಸ್ ತೆಗೆದುಕೊಳ್ಳಲಾಗಿದೆ. ಭಯೋತ್ಪಾದನೆಗೆ ಕಾಂಗ್ರೆಸ್ ನೇರವಾಗಿ ಬೆಂಬಲ ನೀಡುತ್ತಿದೆ. ನೇರವಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಜಾತಿ ಹೆಸರಲ್ಲಿ ವೋಟ್ ಕೇಳಲು ಕಾಂಗ್ರೆಸ್ಗೆ ಯಾವುದೇ ನೈತಿಕತೆ ಇಲ್ಲ. ಇಡೀ ದೇಶದಲ್ಲಿ ಈಗಾಗಲೇ ಪಿಎಎಫ್ಐ ಬ್ಯಾನ್ ಆಗಿರೋ ವಿಚಾರ ಕಾಂಗ್ರೆಸ್ಗೆ ಗೊತ್ತಿಲ್ವ ಎಂದು ಪ್ರಶ್ನಿಸಿದರು