ನಿಫಾ ವೈರಸ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳದ ಮಲಪ್ಪುರಂನ 14 ವರ್ಷದ ಬಾಲಕ ಭಾನುವಾರ ಮೃತಪಟ್ಟಿದ್ದಾನೆ.
ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಹೇಳಿಕೆ ಪ್ರಕಾರ ಬಾಲಕ ಇಂದು ಬೆಳಗ್ಗೆ ಕೋಳಿಕ್ಕೋಡ್ನ ಮೆಡಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಬೆಳಗ್ಗೆ 11:30ರ ಸಮಯದಲ್ಲಿ ಕೊನೆಯುಸಿರೆಳೆದಿರುವುದು ಗೊತ್ತಾಗಿದೆ.
ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್ನ ನಿವಾಸಿಯಾದ ಆ ಹುಡುಗನಿಗೆ ನಿಪಾ ವೈರಸ್ ಸೋಂಕು ತಗುಲಿರುವುದು ನಿನ್ನೆ ಶನಿವಾರ ದೃಢಪಟ್ಟಿತ್ತು.
‘ಆ ಬಾಲಕ ವೆಂಟಿಲೇಟರ್ನಲ್ಲಿದ್ದ. ಇಂದು ಬೆಳಗ್ಗೆ ಆತನ ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆ ಆಗಿತ್ತು. 10:50ರಲ್ಲಿ ತೀವ್ರವಾಗಿ ಹೃದಯ ಸ್ತಂಭನ ಉಂಟಾಯಿತು. ಆ ಬಳಿಕ ಪುನಶ್ಚೇತನಗೊಳಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಬೆಳಗ್ಗೆ 11:30ಕ್ಕೆ ಮೃತಪಟ್ಟ… ಅಂತಾರಾಷ್ಟ್ರೀಯ ನಿಯಮಗಳ ಅನುಸಾರವಾಗಿ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲಾಗುವುದು,’ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೇರಳದಲ್ಲಿ ಈ ಸೀಸನ್ನಲ್ಲಿ ಇದು ಮೊದಲ ನಿಪಾ ವೈರಸ್ ಪ್ರಕರಣವಾಗಿದೆ. ಇದೇ ಕೋಳಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಮೂವರು ವ್ಯಕ್ತಿಗಳನ್ನು ಐಸೋಲೇಶನ್ನಲ್ಲಿ ಇಡಲಾಗಿದೆ. ಇವರಿಗೆ ನಿಪಾ ವೈರಸ್ ಸೋಂಕು ಇದೆಯಾ ಎಂಬುದು ಇನ್ನೂ ದೃಢಪಟ್ಟಿಲ್ಲ.
ನಿಫಾ ವೈರಸ್ ಸೋಂಕಿಗೆ ಮದ್ದು ಇಲ್ಲ…
ನಿಫಾ ವೈರಸ್ ಕೇರಳಕ್ಕೆ ಆಗಾಗ್ಗೆ ಬಾಧಿಸುತ್ತಿರುತ್ತದೆ. ಬಾವುಲಿ ಮತ್ತು ಹಂದಿಗಳ ಮೈನಲ್ಲಿರುವ ದ್ರವದ ಮೂಲಕ ಮನುಷ್ಯರಿಗೆ ನಿಫಾ ವೈರಸ್ ಹರಡುತ್ತದೆ. ಇದು ಮನುಷ್ಯರಿಂದ ಮನುಷ್ಯರಿಗೂ ಹರಡುವ ಸೋಂಕು ರೋಗವಾಗಿದೆ. ಕೋವಿಡ್ ಸೋಂಕಿನಂತೆ ಈ ನಿಫಾ ವೈರಸ್ ಸೋಂಕು ಗುಣಪಡಿಸಲು ಯಾವ ಚಿಕಿತ್ಸೆ ಇಲ್ಲ. ಮರಳ ಪ್ರಮಾಣ ಶೇ. 70ರಷ್ಟಿದೆ. ಅಂದರೆ ಸೋಂಕಿತರಲ್ಲಿ ಶೇ. 70ರಷ್ಟು ಜನರು ಬದುಕುವುದಿಲ್ಲ.