ತಿರುವನಂತಪುರಂ: ಕೇರಳದ ಕಳಮಶ್ಶೇರಿ (Kalamassery Kerala) ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಓರ್ವ ವ್ಯಕ್ತಿ ಸ್ವತಃ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ತ್ರಿಶ್ಶೂರ್ ಜಿಲ್ಲೆಯ ಕೊಡಕ್ಕರ ಠಾಣೆಯ ಪೊಲೀಸರ ಮುಂದೆ ಕೊಚ್ಚಿ ನಿವಾಸಿ ಶರಣಾಗಿದ್ದಾನೆ. ಬ್ಲಾಸ್ಟ್ ಬಳಿಕ (ಭಾನುವಾರ) ಮಧ್ಯಾಹ್ನ 1.30ರ ವೇಳೆಗೆ ಪೊಲೀಸ್ ಠಾಣೆಗೆ ಬಂದಿದ್ದ ವ್ಯಕ್ತಿ, ಬಾಂಬ್ ಇಟ್ಟಿದ್ದು ನಾನೇ ಎಂದು ಬಾಯ್ಬಿಟ್ಟಿದ್ದಾನೆ. ಸದ್ಯ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆತ ನೀಡಿರುವ ಹೇಳಿಕೆಯನ್ನು ಆಧರಿಸಿ ಅಜ್ಞಾತ ಸ್ಥಳದಲ್ಲಿಟ್ಟು ತನಿಖೆ ನಡೆಸುತ್ತಿದ್ದಾರೆ.
ಪ್ರಾರ್ಥನಾ ಮಂದಿರದಲ್ಲಿ (Jehovah’s Witnesses convention) ಸುಮಾರು 2,500 ಮಂದಿ ಜಮಾಯಿಸಿದ್ದರು. ಈ ವೇಳೆ ಭಾರೀ ಸ್ಫೋಟವಾಗಿದೆ. ಈ ಸ್ಫೋಟಕ್ಕೂ ಮುನ್ನ ನೀಲಿ ಬಣ್ಣದ ಕಾರೊಂದು ಹೊರಟಿರುವುದು ಸಿಸಿಟಿವಿ ಪರಿಶೀಲನೆಯ ವೇಳೆ ಬಯಲಾಗಿದೆ. ಕನ್ವೆನ್ಷನ್ ಸೆಂಟರ್ ನಿಂದ ವೇಗವಾಗಿ ಕಾರು ಹೊರಟಿತ್ತು. ಸದ್ಯ ಕಾರು ಸಾಗುತ್ತಿರುವ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ ಪೊಲೀಸರು, ಕಾರು ಪತ್ತೆಹಚ್ಚಲು ಮುಂದಾಗಿದ್ದಾರೆ.
ಪ್ರಕರಣ ಸಂಬಂಧ ಇದೀಗ ಕೇರಳದ 14 ಜಿಲ್ಲೆಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಂತೆಯೇ ಕಣ್ಣೂರು ರೈಲ್ವೇ ನಿಲ್ದಾಣದಲ್ಲಿ ಪರಿಶೋಧನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಗುಜರಾತಿ ಭಾಷೆ ಮಾತನಾಡುತ್ತಿದ್ದ ಈತನ ಬ್ಯಾಗ್ ನಲ್ಲಿ ಕೆಲವು ಪ್ರಮುಖ ಸ್ಥಳಗಳ ಫೋಟೋ ಇತ್ತು. ಈ ಚಿತ್ರಗಳ ಬಗ್ಗೆ ಕೇಳಿದಾಗ ಸೂಕ್ತ ಉತ್ತರ ನೀಡಲಿಲ್ಲ. ಈ ಹಿನ್ನೆಯಲ್ಲಿ ಆತನನ್ನು ಕೂಡ ಕೇರಳ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.