ನವದೆಹಲಿ: ಜಾರಿ ನಿರ್ದೇಶನಾಲಯದಿಂದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ಸುದ್ದಿ ಇನ್ನೂ ಹಸಿಯಾಗಿದೆ. ಇದರ ನಡುವೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ್ದಾರೆ. ಖಾಸಗಿ ಮಿನರಲ್ ಕಂಪನಿಯೊಂದು ವೀಣಾ ವಿಜಯನ್ ಹಾಗೂ ಅವರ ಸಂಸ್ಥೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದೆ ಎಂಬ ಆರೋಪದಡಿ ಇಡಿ ಪ್ರಕರಣ ದಾಖಲಿಸಿಕೊಂಡಿದೆ.
ಈ ಪ್ರಕರಣ 2018 – 19ರ ಅವಧಿಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದ್ದು ಎನ್ನಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯ ಸಂಸ್ಥೆ ಪ್ರಕರಣ ದಾಖಲಿಸಿದ್ದು, ಅಕ್ರಮದಲ್ಲಿ ಭಾಗಿಯಾದ ವ್ಯಕ್ತಿಗಳಿಗೆ ಸಮನ್ಸ್ ನೀಡುವ ಸಾಧ್ಯತೆ ಇದೆ. ಗಂಭೀರ ವಂಚನೆ ತನಿಖಾ ಕಚೇರಿ (ಎಸ್ಎಫ್ಐಒ) ನೀಡಿದ ದೂರಿನ ಆಧಾರದ ಮೇಲೆ ಇಡಿ ವೀಣಾ ವಿಜಯನ್ ವಿರುದ್ಧ ತನಿಖೆ ಆರಂಭಿಸಿದೆ.
ಖಾಸಗಿ ಮಿನರಲ್ ಕಂಪನಿಯಾದ ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್ಎಲ್), ವೀಣಾ ಅವರ ಕಂಪನಿ ಎಕ್ಸಾಲಾಜಿಕ್ ಸಲೂಷನ್ಸ್ಗೆ 2018-2019ರಲ್ಲಿ ಯಾವುದೇ ಸೇವೆಗಳನ್ನು ಪಡೆಯದೆ 1.72 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಾವತಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಅದರ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ.
ಆದಾಯ ತೆರಿಗೆ ಇಲಾಖೆಯ ವಿಚಾರಣೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಈ ಹಿಂದೆ ವೀಣಾ ವಿಜಯನ್ ಅವರ ಎಕ್ಸಾಲಾಜಿಕ್ ಸಲೂಷನ್ಸ್ ಎಸ್ಎಫ್ಐಒ ತನಿಖೆಯನ್ನು ಕರ್ನಾಟಕ ಹೈಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಆದರೆ, ಎಕ್ಸಾಲಾಜಿಕ್ ಸಲೂಷನ್ಸ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಕಳೆದ ತಿಂಗಳು ವಜಾಗೊಳಿಸಿತ್ತು. ಇದರ ಬೆನ್ನಲ್ಲಿಯೇ ಇಡಿ ವೀಣಾ ವಿಜಯನ್ ವಿರುದ್ಧ ಪಿಎಂಎಲ್ಎ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದೆ.