ಕೇರಳದ ವಯನಾಡು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುತ್ತಿರೋದು ಇದೇ ಮೊದಲೇನೂ ಅಲ್ಲ. ಹೀಗಾಗಿ ವಯನಾಡು ಜಿಲ್ಲೆಯನ್ನು ‘ವಿಪತ್ತು ವಲಯ’ ಎಂದೇ ಗುರುತಿಸಲಾಗಿದೆ. ಐದು ವರ್ಷಗಳ ಹಿಂದೆ ಘೋರ ಭೂಕುಸಿತ ಒಂದು ಆಗಿತ್ತು. ಆಗಸ್ಟ್ 8, 2019 ರಂದು ಸಂಭವಿಸಿದ ದುರಂತದಲ್ಲಿ 17 ಮಂದಿ ಪ್ರಾಣ ಕಳೆದುಕೊಂಡಿದ್ದರು. 57 ಮನೆಗಳು ಸಂಪೂರ್ಣ ನಾಶವಾಗಿದ್ದವು.
ಭೂಕುಸಿತದ ಮಹಾ ದುರಂತದಲ್ಲಿ ಒಂದು ಹಳ್ಳಿ ಸಂಪೂರ್ಣ ಕಳೆದುಹೋಗಿತ್ತು. ಅದುವೇ ಪುತ್ತುಮಲ ಗುಡ್ಡ ದುರಂತ. ಈ ದುರಂತದ 5ನೇ ವರ್ಷಾಚರಣೆಗೆ ಒಂದು ವಾರ ಬಾಕಿ ಇರುವಾಗಲೇ ಚುರಲ್ ಹಿಲ್ನಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದ್ದು, ಇಡೀ ವಯನಾಡನ್ನು ತಲ್ಲಣಗೊಳಿಸಿದೆ.
ಭೂ-ಕುಸಿತದ ಹೊಡೆತಕ್ಕೆ ಚುರಲ್ ಪರ್ವತದ ಮಧ್ಯೆ ಧುಮ್ಮುಕ್ಕಿ ಹರಿಯುವ ಚುರಲ್ಮಲಾ ನದಿ ದಿಕ್ಕು ತಪ್ಪಿ ಹರಿಯುತ್ತಿದ್ದು, ಭಾರೀ ಅನಾಹುತ ಸೃಷ್ಟಿಮಾಡ್ತಿದೆ. ಅಂದ್ಹಾಗೆ ಚುರಲ್ಮಲಾ ಮತ್ತು ಪುತ್ತುಮಲ ದುರಂತದ ಸ್ಥಳದಿಂದ ಕೇವಲ ಎರಡು ಕಿಲೋ ಮೀಟರ್ ದೂರದಲ್ಲಿದೆ ಅಷ್ಟೇ. ಅಂದರೆ ಕೇವಲ 2 ಕಿಲೋ ಮೀಟರ್ ದೂರದ ಅಂತರದಲ್ಲೇ ಮತ್ತೊಂದು ದುರಂತ ಸಂಭವಿಸಿದೆ. ಅಂದು 17 ಜೀವ ಹೋಗಿದ್ದರೆ, ಇದು 75ಕ್ಕೂ ಹೆಚ್ಚು ಜನರ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಮಂಡಕೈನಲ್ಲಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿ ಪಟ್ಟಣ ಸಂಕಷ್ಟಕ್ಕೆ ಸಿಲುಕಿತ್ತು. ಅವರ ರಕ್ಷಣೆ ನಡೆಯುತ್ತಿದ್ದ ವೇಳೆಯೇ ಅಂದರೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಚುರಲ್ಮಲಾ ಶಾಲೆ ಬಳಿ ಭೂಕುಸಿತ ಸಂಭವಿಸಿದೆ. ವೆಲ್ಲರ್ಮಲಾ ಶಾಲೆ ಕೆಸರು ನೀರಿನಲ್ಲಿ ಮುಳುಗಿದೆ.
ಭೂಕುಸಿತದಿಂದಾಗಿ ಮುಂಡಕೈ, ಅಟ್ಟಮಳ, ಚುರಲ್ಮಳದಲ್ಲಿ ಹೆಚ್ಚಿನ ಹಾನಿ ಆಗಿದೆ. ಚೆಂಬ್ರಾ ಮತ್ತು ವೆಳ್ಳಾರಿ ಪರ್ವತಗಳಿಂದ ಹುಟ್ಟುವ ನದಿಯ ದಡದಲ್ಲೇ ಚುರಲ್ಮಲಾ ಮತ್ತು ಮುಂಡಕೈ ಇವೆ. ಈ ಎರಡು ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಭೂಕುಸಿತದಲ್ಲಿ ಕೊಚ್ಚಿ ಹೋಗಿದೆ. ಇದರೊಂದಾಗಿ ಉಭಯ ಸಂಪರ್ಕ ಕೊಂಡಿ ಕಳಚಿದೆ. ದುರಂತದಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ. 400ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂಬ ಮಾಹಿತಿ ಇದೆ.