ಕಬಿನಿ ಡ್ಯಾಂನಿಂದ 70 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಪರಿಣಾಮ ಮೈಸೂರು ಜಿಲ್ಲೆಯ ನಂಜನಗೂಡು ಬಳಿ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಸಂಚಾರ ಬಂದ್ ಮಾಡಲಾಗಿದೆ. ನಂಜನಗೂಡು ಮೈಸೂರು ರಸ್ತೆಯನ್ನು ಬಂದ್ ಮಾಡಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಊಟಿ, ತಮಿಳುನಾಡು, ಕೇರಳಕ್ಕೆ ಸಂಪರ್ಕ ಭಾಗಶಃ ಕಡಿತಗೊಂಡಿದೆ.
ನಂಜನಗೂಡಿನ ಮಲ್ಲನ ಮೂಲೆ ಮಠದ ಬಳಿ ರಸ್ತೆ ಜಲಾವೃತಗೊಂಡಿದ್ದು,ವಾಹನ ಸವಾರರು ಪರದಾಡುವಂತಾಗಿದೆ. ನಂಜನಗೂಡಿನಿಂದ ಮೈಸೂರಿಗೆ ತೆರಳುವವರು ಹೆಜ್ಜಿಗೆ ಸೇತುವೆ ಮೂಲಕ ಸಾಗಿ ತಾಂಡವಪುರದ ಮೂಲಕ ತೆರಳಬೇಕಾಗಿದೆ. ಮೈಸೂರಿನಿಂದ ನಂಜನಗೂಡಿಗೆ ಬರಬೇಕಾದ ವಾಹನಗಳು ಹೆದ್ದಾರಿಯ ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ತಿರುವು ಪಡೆದು ಹೆಜ್ಜಿಗೆ ಸೇತುವೆ ಹಾದು ನಂಜನಗೂಡು ತಲುಪಬೇಕಿದೆ ಎಂದು ನಂಜನಗೂಡು ತಾಲ್ಲೂಕು ಆಡಳಿತ ಸಾರ್ವಜನಿಕರಿಗೆ ಸಂದೇಶ ರವಾನಿಸಿದೆ..