ಚಾಲೆಂಜಿಂಗ್ ಸ್ಟಾರ್, ಅಭಿಮಾನಿಗಳ ಆರಾಧ್ಯ ದೈವ ದರ್ಶನ್ ಇದೀಗ ಕೊಲೆ ಪ್ರಕರಣದ ಆರೋಪಿ. ಒಂದು ಹೆಣ್ಣಿನ ಕಾರಣಕ್ಕೆ ಅಭಿಮಾನಿಯನ್ನೇ ಕೊಂದ ಆರೋಪ ದರ್ಶನ್ ಮೇಲಿದೆ.ದರ್ಶನ್ ರ ಈ ನಡೆಯನ್ನು ಸಾಕಷ್ಟು ಮಂದಿ ಖಂಡಿಸಿದ್ದಾರೆ. ಸ್ಟಾರ್ ಎಂದ ಮಾತ್ರ ಏನು ಬೇಕಾದ್ರು ಮಾಡಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಅನ್ನೋದನ್ನ ಪೊಲೀಸರು ತೋರಿಸಿದ್ದಾರೆ. ಇದೀಗ ‘ಕೆರೆಬೇಟೆ’ ಚಿತ್ರದ ನಟ, ನಿರ್ಮಾಪಕ ಗೌರಿಶಂಕರ್ ಕೂಡ ಘಟನೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ಕಾರಣ ಏನೇ ಇರಲಿ, ಆದರೆ ಒಬ್ಬ ಮನುಷ್ಯನನ್ನು ಹೊಡೆದು ಕೊಲ್ಲುವಷ್ಟು ಕ್ರೌರ್ಯವಿದೆ ಎಂದರೆ ಅದು ಎಂಥ ನೀಚ ಮನಸ್ಥಿತಿ ಇರಬಹುದು’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
‘ಕೊಲೆಯಾದ ವ್ಯಕ್ತಿ ಕೆಟ್ಟದಾಗಿ ಮೆಸೇಜ್ ಮಾಡಿರೋದು ತಪ್ಪೇ. ಅದಕ್ಕೆ ಬೈದು ಅಥವಾ ಎರಡು ಹೊಡೆತ ಹೊಡೆದು, ಇಲ್ಲವೇ ಪೊಲೀಸ್ ಕಂಪ್ಲೇಂಟ್ ನೀಡಿ ಸರಿಯಾದ ಕ್ರಮ ತೆಗೆದುಕೊಳ್ಳುವಂತಹ ಎಲ್ಲ ಶಕ್ತಿ ಇತ್ತು. ಅದನ್ನ ಬಿಟ್ಟು ಮಾನವೀಯತೆಯೇ ಇಲ್ಲದೇ ಹೊಡೆದು ಹೊಡೆದು ಕೊಲೆ ಮಾಡುತ್ತಾರೆಂದರೆ ಏನ್ ಹೇಳ್ಬೇಕು? ಕೊಲೆಯಾದವನ ಹೆಂಡತಿ ಮೂರು ತಿಂಗಳು ಬಸುರಿ. ಆ ಹೆಣ್ಣಿನ ಉಳಿದ ಬದುಕೇನು? ಸಾಯುವಾಗ ಅವನು ತನ್ನ ಬಸುರಿ ಹೆಂಡತಿಯನ್ನು, ಹೊಟ್ಟೆಯಲ್ಲಿರುವ ಆ ಕಂದನನ್ನು ನೆನಪು ಮಾಡಿಕೊಳ್ಳದೇ ಇರುತ್ತಾನಾ? ಅದಕ್ಕಾಗಿ ಎಷ್ಟು ಅಂಗಲಾಚಿರುತ್ತಾನೋ’ ಎಂದು ಬರೆದುಕೊಂಡಿದ್ದಾರೆ.
‘ಇಷ್ಟೆಲ್ಲಾ ಆದಮೇಲೆ ಈ ಕ್ರೌರ್ಯವನ್ನು ಸಮರ್ಥಿಸಿಕೊಳ್ಳುವ ಅಭಿಮಾನಿಗಳಿದ್ರೆ ಒಮ್ಮೆ ನಿಮ್ಮ ತಂದೆ, ತಾಯಿ, ಅಕ್ಕ, ತಂಗಿ ಹೆಂಡತಿ ಮಕ್ಕಳನ್ನು ನೆನಪು ಮಾಡಿಕೊಳ್ಳಿ. ಹಣಬಲ, ತೋಳುಬಲ, ಕೀರ್ತಿ, ಯಶಸ್ಸು ಇದ್ದರೆ ಏನು ಬೇಕಾದ್ರೂ ಮಾಡ್ತಾರೆ. ಏನು ಬೇಕಾದ್ರೂ ಜೈಸ್ತಾರೆ ಅನ್ನೋ ಮನಸ್ಥಿತಿ ಜನಸಾಮಾನ್ಯನಿಗೆ ಬಂದು ಕಾನೂನಿನ ಮೇಲೆ, ಖಾಕಿಯ ಮೇಲೆ, ಕರಿಕೋಟಿನ ಮೇಲೆ ನಂಬಿಕೆ ಕಳಚಿ ಹೋಗಿದೆ. ಈ ಪ್ರಕರಣದಲ್ಲಿ ದೊಡ್ಡವರು ಸಣ್ಣವರು ಅನ್ನೋದಿಲ್ಲ ಎಲ್ಲರಿಗೂ ಒಂದೇ ಕಾನೂನು, ಒಂದೇ ಸಂವಿಧಾನ ಎನ್ನುವ ನ್ಯಾಯಪರತೆಯ ತನಿಖೆಯಾಗಿ, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗಲಿ ಎನ್ನುವುದು ನಮ್ಮಂತಹ ಸಾಮಾನ್ಯರ ಬೇಡಿಕೆ’ ಎಂದು ಗೌರಿ ಶಂಕರ್ ಬರೆದುಕೊಂಡಿದ್ದಾರೆ.