ಬೆಂಗಳೂರು: ಸದನದ ಕಿಚ್ಚುನ್ನು ಬಿಜೆಪಿ ನಾಯಕರು ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿದ್ರು. ಶಕ್ತಿಸೌಧದ ಗಾಂಧಿ ಪ್ರತಿಮೆಯ ಬಳಿ ಕುಳಿತು ಕಾಂಗ್ರೆಸ್ ಹಾಗೂ ಸ್ಪೀಕರ್ ವಿರುದ್ಧ ಧಿಕ್ಕಾರ ಕೂಗಿದ್ರು. ಪಾದಯಾತ್ರೆ ಮೂಲಕ ರಾಜಭವನಕ್ಕೆ ಹೋದ ಕೇಸರಿ ನಾಯಕರು ಖಾದರ್ ಏಕಪಕ್ಷೀಯ ನಡೆ, ಅಧಿಕಾರಿಗಳ ದುರ್ಬಳಕೆ ವಿಚಾರವಾಗಿ ದೂರು ನೀಡಿದ್ರು, ಬಿಜೆಪಿಯ ಹೋರಾಟಕ್ಕೆ ದಳಪತಿಗಳು ಕೈಜೋಡಿಸಿದ್ದು ನಾಳೆ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಿದ್ದವಾಗಿದೆ….
ಕಾಂಗ್ರೆಸ್ ಪಕ್ಷದ ಏಜೆಂಟ್ ಖಾದರ್ ಗೆ ಧಿಕ್ಕಾರ, ಬಿಜೆಪಿ ಶಾಸಕರನ್ನು ಅಮಾನತು ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ, ಪ್ರಜಾಪ್ರಭುತ್ವ ಕ್ಕೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ.
ಅನ್ಯಾಯ, ಅನ್ಯಾಯ ಸ್ಪೀಕರ್ ಇಂದ ಅನ್ಯಾಯ ಇಂತಹ ಆಕ್ರೋಶದ ಘೋಷಣೆಗಳು ಕೇಳಿಬಂದಿದ್ದು ವಿಧಾನಸೌಧ – ವಿಕಾಸಸೌಧದ ಮಧ್ಯದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಎದುರು. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಶಿಷ್ಟಾಚಾರ ಸಮರದ ಕಿಚ್ಚು ಜೋರಾಗ್ತಿದೆ10 ಶಾಸಕರ ಅಮಾನತು ಖಂಡಿಸಿ ಬಿಜೆಪಿ ನಾಯಕರು ಇಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶಾಸಕರು, ಪರಿಷತ್ ಸದಸ್ಯರೆಲ್ಲಾ ಗಾಂಧಿ ಪ್ರತಿಮೆ ಬಳಿ ಕುಳಿತು ಪ್ರತಿಭಟನೆ ಮಾಡಿದ್ರು.
ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಕೇಸರಿ ನಾಯಕರು ವಾಗ್ದಾಳಿ ನಡೆಸಿದ್ರು. ಇದೊಂದು ಗುಂಡಾಗಿರಿ ಸರ್ಕಾರ, ಇತಿಹಾಸದಲ್ಲೇ ಯಾವುದೇ ಸಭಾಧ್ಯಕ್ಷರು ಒಂದು ಪಕ್ಷದ ಪರವಾಗಿಲ್ಲ ನಡೆದುಕೊಂಡಿಲ್ಲ. ಸ್ಪೀಕರ್ ಆದವರು ಒಂದು ಪಾರ್ಟಿ ಪರವಾಗಿ ಇರಬಾರದು. ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಲಾಲು ಪ್ರಸಾದ್ ಯಾದವ್ ಭೇಟಿ ಮಾಡಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಾರೆ. ಕಾಂಗ್ರೆಸ್ ಸರ್ಕಾರ ಐಎಎಸ್ ಅಧಿಕಾರಿಗಳ ದುರ್ಬಳಕೆ ಮಾಡಿಕೊಂಡಿದೆ ಇದರ ವಿರುದ್ಧ ನಾವು ಹೋರಾಟ ಮಾಡಿ, ನ್ಯಾಯ ಕೇಳಿದ್ದಕ್ಕೆ ಅಮಾನತು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಧೋರಣೆ, ಸ್ಪೀಕರ್ ಏಕಪಕ್ಷೀಯ ನಿರ್ಧಾರದ ವಿರುದ್ದ ನಾವು ರಾಜ್ಯಾದ್ಯಂತ ಹೋರಾಟ ಮಾಡ್ತೀವಿ ಎಂದು ಕೇಸರಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ರು.
ಪ್ರತಿಭಟನೆ ಬಳಿಕ ಬಿಜೆಪಿ ನಾಯಕರು ವಿಧಾನಸೌಧದಿಂದ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿದ್ರು. ಈ ವೇಳೆ ಬಿಜೆಪಿ ಹೋರಾಟಕ್ಕೆ ಜೆಡಿಎಸ್ ನಾಯಕರು ಸಾಥ್ ನೀಡಿದ್ರು ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಕೆಲ ಶಾಸಕರು ಕೇಸರಿ ನಾಯಕರ ಜೊತೆ ರಾಜಭವನಕ್ಕೆ ಬಂದು ರಾಜ್ಯಪಾಲರಿಗೆ ಜಂಟಿಯಾಗಿ ದೂರು ಸಲ್ಲಿಸಿದ್ರು. ದೂರು ಸಲ್ಲಿಸಿದ ಬಳಿಕ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ ಕರ್ನಾಟಕದ ಇತಿಹಾಸದಲ್ಲಿ ಇಂತ ನಿರ್ಣಯ ಆಗಿಲ್ಲ. ನಮ್ಮ ಧ್ವನಿಯನ್ನು ಧಮನ ಮಾಡಲು ಹೊರಟಿದ್ದಾರೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಆಗದಕ್ಕೆ ಈ ರೀತಿ ಮಾಡ್ತಿದ್ದಾರೆ. ಸ್ಪೀಕರ್ ಅವರ ನಡವಳಿಕೆ ಅಕ್ಷಮ್ಯ ಅಪರಾಧ. ನಾವು ನಾಳೆಯೂ ಸದನಕ್ಕೆ ಹೋಗಲ್ಲ. ಜೆಡಿಎಸ್ ಶಾಸಕರು ಕೂಡ ಸದನಕ್ಕೆ ಹೋಗ್ತಿಲ್ಲ. ನಾವು ಜೆಡಿಎಸ್ ನವರು ನಾಳೆ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡ್ತೀವಿ ಕಾಂಗ್ರೆಸ್ ಪಕ್ಷಕ್ಕೆ ಬುದ್ದಿ ಕಲಿಸ್ತೀವಿ ಅಂತ ಎಚ್ಚರಿಕೆ ನೀಡಿದ್ರು.
ಇನ್ನು ಪ್ರತಿಭಟನೆಗೂ ಮುನ್ನ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ನೆನ್ನೆಯ ಬೆಳವಣಿಗೆಗೆ ಆಡಳಿತಪಕ್ಷದ ಉದ್ಧಟತನ ಕಾರಣ.
ಮಹಾಘಟಬಂಧನ್ ಸಭೆಗೆ ಸ್ವಾಗತ ಕೋರಿ, ಕುಶಲೋಪರಿ ನೋಡಿಕೊಳ್ಳಲು ಮುಖ್ಯಮಂತ್ರಿಗಳ ಕಛೇರಿಯಿಂದ ಆದೇಶ ಹೋಗಿದೆ, ನಿಮಗೆ ನಾಚಿಕೆ ಮಾನ ಮರ್ಯಾದೆ ಇದ್ರೆ ಸತ್ಯ ಹೊರಗಿಡಿ. ಅಧಿಕಾರ ಶಾಶ್ವತ ಅಲ್ಲ, ಅಜ್ಞಾನದಿಂದ ನಡೆಸುತ್ತಿದ್ದೀರಿ.
ರಾಜ್ಯದ ಇತಿಹಾಸದಲ್ಲಿ ಇದೊಂದು ಕರಾಳ ಅಧ್ಯಾಯ ನಿಮ್ಮ ಹಠಮಾರಿ ಧೋರಣೆಯಿಂದ ಸದನದಲ್ಲಿ ಇಂತ ಘಟನೆ ನಡೆದಿದ್ದು ಅಂತ ಹೆಚ್ ಡಿಕೆ ವಾಗ್ದಾಳಿ ನಡೆಸಿದ್ರು.
ಒಟ್ನಲ್ಲಿ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಉಭಯ ಶಾಸಕರು ಸದನವನ್ನ ಭಹಿಷ್ಕರಿಸಿ ಪ್ರತಿಭಟನೆ ಮಾಡಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ನಾಳೆಯೂ ಸಹ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ನಾಳೆಯ ಪ್ರತಿಭಟನೆ ಹೇಗಿರಲಿದೆ ಎರಡೂ ಪಕ್ಷದ ನಾಯಕರ ಹೋರಾಟ ಯಾವ ಮಟ್ಟಕ್ಕೆ ತಲುಪುತ್ತೆ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತ ಎಂಬುದನ್ನ ಕಾದುನೋಡಬೇಕಾಗಿದೆ…….