ಬೆಂಗಳೂರು:- KRPP ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ್ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಸರ್ವ ಯತ್ನಗಳು ಬಿಜೆಪಿಯಿಂದ ನಡೆಯುತ್ತಿವೆ.
ಇತ್ತೀಚೆಗಷ್ಟೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ ಚುನಾವಣೆಯಲ್ಲಿ ಗೆದ್ದ ಗಾಲಿ ಜನಾರ್ಧನ್ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆತರುವ ಮೂಲಕ ಮುಂದಿನ ಚುನಾವಣೆಗಳಲ್ಲಿ ಸ್ಥಾನ ಕೈತಪ್ಪದಂತೆ ಬಿಜೆಪಿ ಯೋಚಿಸಿದೆ. ಇದರಿಂದ ಕಾಂಗ್ರೆಸ್ಗು ತಕ್ಕ ಉತ್ತರ ನೀಡಿದಂತಾಗುತ್ತದೆ ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ.
ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ದಶಕದಿಂದಲೂ ರಾಜಕೀಯದಿಂದ ದೂರ ಉಳಿದಿದ್ದ ಗಾಲಿ ಜನಾರ್ಧನ್ ರೆಡ್ಡಿ ಇದೇ 2023ರ ಚುನಾವಣೆ ವೇಳೆ ಸ್ವಂತ ಪಕ್ಷ ಕೆಆರ್ಪಿಪಿ ಕಟ್ಟುವ ಮೂಲಕ ಕಲ್ಯಾಣ ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳಿಗೆ ಠಕ್ಕರ್ ಕೊಟ್ಟಿದ್ದರು.
ಇದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿಯಿಂದ ಸ್ಪರ್ಧಿಸಿ ಕೆಆರ್ಪಿಪಿಯಿಂದ ರೆಡ್ಡಿಯವರು ಮಾತ್ರವೇ ಗೆದ್ದರು. ಬಳ್ಳಾರಿ ನಗರ ಕ್ಷೇತ್ರದಿಂದ ಬಿಜೆಪಿಗೆ ವಿರುದ್ಧ ಪತ್ನ ಲಕ್ಷ್ಮೀ ಅರುಣಾ ಅವರನ್ನು ಅಖಾಡಕ್ಕಿಳಿಸಿ ಬಿಜೆಪಿಗೆ ಸೆಡ್ಡು ಹೊಡೆದಿದ್ದರು. ಇದೆಲ್ಲ ಗಮನಿಸಿರುವ ಬಿಜೆಪಿ ಮುಂದೆ ಹೀಗಾಗದಂತೆ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಕೆಆರ್ಪಿಪಿ ಸಂಸ್ಥಾಪಕರನ್ನು ಕರೆತರಲು ಕೇಂದ್ರ ವರಿಷ್ಠರ ಜೊತೆಗೆ ರಾಜ್ಯ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಜನಾರ್ಧನ್ ರೆಡ್ಡಿ ಅವರನ್ನು ಪಕ್ಷಕ್ಕೆ ಕರೆತಂದರೆ ಪಕ್ಷದ ಮುಂದಿನ ಸವಾಲುಗಳು ಏನು?, ಇದರಿಂದ ಸ್ಥಳೀಯ ಮಟ್ಟದಲ್ಲಿ ಆಗುವ ಲಾಭಗಳು ಕುರಿತು ಚರ್ಚೆ ನಡೆಸಲಾಗಿದೆ. ಸದ್ಯ ರಾಜಕೀಯ ವಲಯದಲ್ಲಿ ಈ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ರೆಡ್ಡಿಯನ್ನು ಕರೆತರುವ ಮೂಲಕ ಲೋಕಸಭಾ ಚುನಾವಣೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಮುಂದಾಗಿದೆ. ಇದರೊಂದಿಗೆ ನಂತರ ಬರಲಿರುವ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ಪದವಿಧರರ ಕ್ಷೇತ್ರದ ಚುನಾವಣೆಗಳಲ್ಲಿ ಸೀಟು ಭದ್ರಪಡಿಸಿಕೊಳ್ಳಲು, ತಮ್ಮ ಮತ ಬ್ಯಾಂಕ್ ಕೈತಪ್ಪದಂತೆ ರಣತಂತ್ರ ಹೆಣೆಯುತ್ತಿದೆ. ಸದ್ಯ ಈ ಕುರಿತು ಎಲ್ಲವು ಅಂತಿಮಗೊಳ್ಳಬೇಕಿದೆ.