ಬೆಂಗಳೂರು: ಇಷ್ಟು ದಿನ ಜನರನ್ನ ಹೊತ್ತು ತಿರುಗುವ ಕೆಎಸ್ಆರ್ಟಿಸಿ ಬಸ್ ನೋಡಿದ್ದೀರಿ. ಆದ್ರೆ ಇನ್ಮುಂದೆ ಲಗೇಜ್ ಗಳನ್ನ ಹೊತ್ತು ಸಾಗುವ ಕೆಎಸ್ಆರ್ಟಿಸಿ ಲಾರಿಗಳು ರಸ್ತೆಗಿಳಿಯಲಿವೆ. ಹೌದು ಆರ್ಥಿಕವಾಗಿ ದಿವಾಳಿಯಾಗಿರೋ ನಿಗಮವನ್ನ ಮೇಲುತ್ತಲು ಲಾಜಿಸ್ಟಿಕ್ಸ್ ವಿಭಾಗದಲ್ಲೂ ತನ್ನ ಅದೃಷ್ಟ ಪರೀಕ್ಷೆ ಮಾಡಲು ನಿಗಮ ಮುಂದಾಗಿದೆ.
ಕೆಎಸ್ಆರ್ಟಿಸಿ..ಇದು ರಾಜ್ಯದ ಸಾರಿಗೆ ನಿಗಮ.ನಿತ್ಯ ಲಕ್ಷಾಂತರ ಮಂದಿ ಈ ಬಸ್ ಗಳಲ್ಲಿ ಪ್ರಯಾಣ ಮಾಡ್ತಾರೆ. ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ಈಗಾಗಲೇ ಮೈಲುಗಲ್ಲು ಸಾಧಿಸಿರೋ KSRTC ಈಗ ಮತ್ತೊಂದು ವಾಣಿಜ್ಯ ಸೇವೆ ನೀಡಲು ಮುಂದಾಗಿದೆ.ಇಷ್ಟು ದಿನ ಪ್ರಯಾಣಿಕರು ಸಂಚರಿಸುವ ಬಸ್ನಲ್ಲಿ ಪಾರ್ಸೆಲ್ ಸೇವೆ ಒದಗಿಸಲಾಗುತ್ತಿತ್ತು. ಜೊತೆಗೆ ಕೆಲ ಖಾಸಗಿಯವರಿಗೆ ಕಾರ್ಗೋ ಸಾಗಣೆ ಟೆಂಡರ್ಗಳನ್ನು ನೀಡಿ ಅವರಿಂದ ವರ್ಷಕ್ಕೆ 28 ಕೋಟಿಯಷ್ಟು ಲಾಭವನ್ನು ಕೆಎಸ್ಆರ್ಟಿಸಿ ತನ್ನ ಬೊಕ್ಕಸಕ್ಕೆ ತುಂಬಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ಕೆಲ ದಿನಗಳಲ್ಲಿ ಲಗೇಜ್ ಸಾಗಣೆಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಖುದ್ದು ಇನ್ನುಮುಂದೆ ತಾವೇ ಈ ಸೇವೆ ನೀಡಲು ನಿಗಮ ಪ್ಲ್ಯಾನ್ ಮಾಡಿದೆ. ಈ ಮೂಲಕ ಖಾಸಗಿಯವರಿಂದ ಬರುತ್ತಿದ್ದ 28 ಕೋಟಿ ರೂ. ಹಣದಿಂದ ಸಾಗಣೆ ಲಾಭವನ್ನು 100 ಕೋಟಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ..
ಹೌದು… ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ತನ್ನ ವ್ಯಾಪ್ತಿಯಲ್ಲಿ ಇನ್ನಷ್ಟು ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸದ್ಯ ಕೆಎಸ್ಆರ್ಟಿಸಿ ಪ್ಲ್ಯಾನ್ಗೆ ಮುಂದಾಗುತ್ತಿದೆ. ಇದೇ ನಿಟ್ಟಿನಲ್ಲಿ ಸದ್ಯ ತನ್ನ ವ್ಯಾಪ್ತಿಯಲ್ಲಿ ಲಾರಿಗಳ ಬಳಕೆಗೆ ನಿಗಮ ತಯಾರಿ ನಡೆಸಿದ್ದು, ಇನ್ನು ಮುಂದೆ ಲಾರಿಗಳ ಮೂಲಕ ಲಗೇಜ್ಗಳನ್ನು ರಾಜ್ಯವ್ಯಾಪಿ ಸಾಗಣೆ ಮಾಡಲು ಮುಂದಾಗಿದೆ. ಇಡೀ ದೇಶದಲ್ಲೇ ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ಛಾಪು ಮೂಡಿಸಿ ನೂರಾರು ಪ್ರಶಸ್ತಿಗಳನ್ನು ಪಡೆದಿರೋ ಕೆಎಸ್ಆರ್ಟಿಸಿ ಹೊಸ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ನಿಗಮಕ್ಕೆ ವಾಣಿಜ್ಯ ಆದಾಯವನ್ನು ಹೆಚ್ಚಿಸಿಕೊಳ್ಳೋ ನಿಟ್ಟಿನಲ್ಲಿ ಲಾಜಿಸ್ಟಿಕ್ಸ್ ಸೇವೆ ಆರಂಭಿಸಲು ನಿರ್ಧರಿಸಿದೆ. ಯಾವ ರೀತಿ ಬಸ್ಗಳ ಸೇವೆಯನ್ನು ಇಡೀ ರಾಜ್ಯದಲ್ಲಿ ನೀಡಲಾಗ್ತಿದ್ಯೋ, ಅದೇ ಮಾದರಿಯಲ್ಲೇ ಲಾರಿಗಳ ಸೇವೆಯನ್ನೂ ಇಡೀ ರಾಜ್ಯಕ್ಕೆ ವಿಸ್ತರಿಸಲು ನಿರ್ಧರಿಸಿದೆ. ಒಂದು ವೇಳೆ ಈ ಪ್ಲಾನ್ ಕ್ಲಿಕ್ ಆಗಿ ಅಂದುಕೊಂಡಿರೋದಕ್ಕಿಂತ ಹೆಚ್ಚು ಲಾಭ ಸಿಗುವಂತಾದ್ರೆ ಇತರೆ ರಾಜ್ಯಗಳಿಗೂ ರೂಟ್ ಹಾಕಿ ಲಾರಿಗಳನ್ನು ಕಳಿಸುವ ಗುರಿ ಹೊಂದಿದೆ.
ಪೈಲಟ್ ಪ್ರಾಜೆಕ್ಟ್ ಆಗಿರೋ ಈ ಲಾಜಿಸ್ಟಿಕ್ಸ್ ಸೇವೆಯ ಮೇಲೆ ಇಲಾಖೆಗೆ ಹೆಚ್ಚಿನ ನಿರೀಕ್ಷೆಯಿದೆ. ಸಾಮಾನ್ಯವಾಗಿ ನಿಗಮಗಳ ಬಸ್ಗಳನ್ನು ಹೇಗೆ ಡಿಪೋಗಳಲ್ಲಿ ನಿರ್ವಹಿಸಲಾಗುತ್ತೋ, ಅದೇ ರೀತಿ ಈ ಲಾರಿಗಳನ್ನು ಕೂಡ ನಿರ್ವಹಿಸಲು ಯೋಜಿಸಲಾಗಿದೆ. ಲಾರಿಯೊಂದಕ್ಕೆ 17.03 ಲಕ್ಷದ ಥರ 3.4 ಕೋಟಿ ರೂಪಾಯಿ ವೆಚ್ಚದಲ್ಲಿ 20 ಲಾರಿಗಳನ್ನು ಖರೀದಿ ಮಾಡಲಾಗಿದೆ. ಪೂಣೆಯಲ್ಲಿ ಈಗಾಗಲೇ ಲಾರಿಗಳ ಬಾಡಿ ಬಿಲ್ಡಿಂಗ್ ಕಾಮಗಾರಿಯೂ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿಬಸ್ಗಳನ್ನು ಹೇಗೆ ಡಿಪೋಗಳಲ್ಲಿ ನಿರ್ವಹಿಸಲಾಗುತ್ತೋ, ಅದೇ ರೀತಿ ಈ ಲಾರಿಗಳನ್ನು ಕೂಡ ನಿರ್ವಹಿಸಲು ಯೋಜಿಸಲಾಗಿದೆ. ಕೆಲವೇ ದಿನಗಳಲ್ಲಿ ನೂತನ ಕೆಎಸ್ಆರ್ಟಿಸಿ ಲಾರಿಗಳು ನಮ್ಮ ರಾಜ್ಯಕ್ಕೆ ಆಗಮಿಸಲಿವೆ.ಇನ್ನು, ಅಂದುಕೊಂಡ ಸಮಯಕ್ಕೆ ಎಲ್ಲ ಕೆಲಸಗಳು ಮುಗಿದ್ರೆ,ಈ ತಿಂಗಳಲ್ಲೇ ಲಾರಿಗಳು ಕೆಎಸ್ಆರ್ಟಿಸಿಯಿಂದ ಲೋಕಾರ್ಪಣೆಯಾಗಲಿದೆ
ಒಟ್ಟಿನಲ್ಲಿ ದೇಶದಲ್ಲಿ ಉತ್ತಮ ಸಾರಿಗೆ ಸಂಸ್ಥೆ ಎಂದು ಹೆಸರು ಪಡೆದಿರುವ ಕೆಎಸ್ಆರ್ಟಿಸಿ ಇದೀಗ ಜನರ ಸೇವೆಗಾಗಿ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಕೆಎಸ್ಆರ್ಟಿಸಿ ಬಸ್ ಗಳಿಗೆ ಸಿಕ್ಕ ರೆಸ್ಪಾನ್ಸ್ ಜನರ ಪ್ರೀತಿ ಕೆಎಸ್ಆರ್ಟಿಸಿಯ ಹೊಸ ಗೂಡ್ಸ್ ಗಾಡಿಗಳು ಸಿಗುತ್ತಾ ಎಂಬುದು ಕಾದು ನೋಡಬೇಕಾಗಿದ್ದು, ಸಾರಿಗೆ ನಿಗಮದ ಈ ಹೊಸ ಪ್ರಯತ್ನ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.