ಬೆಳಗಾವಿ:– ಜಿಲ್ಲೆಯ ಖಾನಾಪುರ ಅರಣ್ಯದಲ್ಲಿ ಅಕ್ರಮವಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಖಾಕಿ ಖೆಡ್ಡಾಗೆ ಬಿದ್ದ ಘಟನೆ ಜರುಗಿದೆ.
ಭರ್ಜರಿ ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಿಗಳು ಜೀವಂತ ಒಂದು ಚಿಪ್ಪು ಹಂದಿ, ಇಬ್ಬರು ಆರೋಪಿಗಳು ಅರೆಸ್ಟ್ ಮಾಡಿದ್ದಾರೆ.
ನಾಲ್ಕು ಜನ ಆರೋಪಿಗಳು ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿರುವಾಗ ಕಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರು ವರ್ಷದ ನಾಲ್ಕೂವರೆ ಕೆಜಿ ತೂಕದ ಜೀವಂತ ಚಿಪ್ಪು ಹಂದಿಯನ್ನು ಅಧಿಕಾರಗಳು ವಶಕ್ಕೆ ಪಡೆದಿದ್ದಾರೆ.
ಖಾನಾಪುರ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಮಾತನಾಡಿ, ಚಿಪ್ಪು ಹಂದಿಯನ್ನು ಪುರುಷತ್ವ ಹೆಚ್ಚಿಸುವ ಔಷಧ ತಯಾರಿಕೆಗಾಗಿ ಬಳಸಲಾಗುತ್ತದೆ. ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಲು ಬೇಡಿಕೆ ಇದೆ. ಖಾನಾಪುರದಿಂದ ಚೀನಾವರೆಗೂ ಚಿಪ್ಪು ಹಂದಿಯನ್ನು ಸಾಗಾಟ ಮಾಡುತ್ತಿದ್ದು, ಸಾಗಾಟ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದರು.
ಖಾನಾಪುರದಿಂದ ಕಾರವಾರಕ್ಕೆ ಕಳಿಸಿ ಅಲ್ಲಿಂದ ಬೋಟ್ ಮೂಲಕ ಕೋಲ್ಕತ್ತಾಗೆ ಸಾಗಿಸುತ್ತಾರೆ. ಬಳಿಕ ಹಡಗಿನಲ್ಲಿ ಚೀನಾಕ್ಕೆ ಸಾಗಾಟ ಮಾಡುತ್ತಿದ್ದರು. ಸದ್ಯ ಚಿಪ್ಪು ಹಂದಿ ಸಾಗಾಟ ತಂಡದ ಶೋಧಕ್ಕಾಗಿ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ. ಒಂದು ಪ್ರತ್ಯೇಕ ತಂಡ ರಚಸಿ ಕಳ್ಳಸಾಕಾಣೆ ತಂಡದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ