ನಟ ಕಿಚ್ಚ ಸುದೀಪ್ ಮುಂಗಡ ಹಣ ಪಡೆದು ಸಿನಿಮಾ ಮಾಡದೆ ಓಡಾಡುತ್ತಿದ್ದಾರೆ ಎಂದು ನಿರ್ಮಾಪಕ ಕುಮಾರ್ ಗಂಭೀರ ಆರೋಪ ಮಾಡಿದ್ದರು. ಕಳೆದ ಹತ್ತು, ಹನ್ನೆರಡು ದಿನಗಳಿಂದ ನಡೆಯುತ್ತಿರುವ ಈ ಜಾಟಾಪಟಿ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಿವರಾಜ್ ಕುಮಾರ್ ಇತಿಶ್ರೀ ಹಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಇದಕ್ಕೆ ಸುದೀಪ್ ಮನಸ್ಸು ಮಾಡಿರುವಂತೆ ಕಾಣುತ್ತಿಲ್ಲ. ಇದೇ ಕಾರಣಕ್ಕೆ ಸುದೀಪ್ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಎನ್.ಕುಮಾರ್ ಪರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದಲ್ಲಿ ಹಲವು ಸಭೆಗಳು ನಡೆದಿವೆ. ಕಿಚ್ಚ ಕೋರ್ಟ್ ಮೆಟ್ಟಿಲು ಏರುತ್ತಿದ್ದಂತೆಯೇ ಮತ್ತೆ ನಿರ್ಮಾಪಕ ಸಂಘ ಹಾಗೂ ವಾಣಿಜ್ಯ ಮಂಡಳಿ ಮತ್ತೊಂದು ಸಭೆ ಮಾಡಿ, ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸುದೀಪ್ ಕೋರ್ಟ್ ಗೆ ಹಾಜರಾಗುತ್ತಿದ್ದಂತೆ ಎನ್.ಕುಮಾರ್, ‘ನಾನು ಸುದೀಪ್ ಅವರ ಮಾನ ತೆಗೆಯುವಂತಹ ಕೆಲಸ ಮಾಡಿಲ್ಲ. ನನ್ನ ನೋವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದೇನೆ. ಅದಕ್ಕೂ ಮೊದಲ ನಿರ್ಮಾಪಕರ ಸಂಘ ಮತ್ತು ವಾಣಿಜ್ಯ ಮಂಡಳಿಯ ಗಮನಕ್ಕೂ ತಂದಿದ್ದೆ. ಒಟ್ಟಿಗೆ ಕೂತು ಮಾತನಾಡಿ, ಬಗೆಹರಿಸಿಕೊಳ್ಳಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು’ ಎಂದಿದ್ದಾರೆ.
ಆದರೆ ಸುದೀಪ್ ಮಾತ್ರ ಈ ವಿಚಾರವನ್ನ ಕೋರ್ಟ್ ನಲ್ಲಿ ಇತ್ಯಾರ್ಥಗೊಳಿಸಲು ತೀರ್ಮಾನಿಸಿದ್ದಾರೆ. ಕೋರ್ಟ್ ಆವರಣದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸುದೀಪ್, ಕಾನೂನು ಮೂಲಕವೇ ಉತ್ತರಿಸುತ್ತೇನೆ ಎಂದು ಸ್ಪಷ್ಟವಾಗಿ ನುಡಿಡಿದ್ದಾರೆ. ಶಿವರಾಜ್ ಕುಮಾರ್ ಮಧ್ಯ ಪ್ರವೇಶದ ಕುರಿತು ಮಾತನಾಡಿದ ಸುದೀಪ್, ‘ಕೋರ್ಟಿಗಿಂತ ಮತ್ತೊಂದು ಸ್ಥಳ ಬೇಕಿಲ್ಲ’ ಎಂದು ಸ್ಪಷ್ಟವಾಗಿ ಸಂದೇಶವನ್ನು ನೀಡಿದ್ದಾರೆ.