ಕಳೆದ 10 ವರ್ಷಗಳಿಂದ ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರ್ತಿದ್ದಾರೆ. ಸುದೀಪ್ ಹೊರತಾಗಿ ಬಿಗ್ ಬಾಸ್ ಅನ್ನು ಅವರಷ್ಟು ಶಕ್ತವಾಗಿ ನಿರೂಪಣೆ ಮಾಡುವ ಇನ್ನೊಬ್ಬ ಸೆಲೆಬ್ರಿಟಿಯನ್ನು ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಆದರೆ ಸುದೀಪ್ ಮುಂದಿನ ಸೀಸನ್ನಿಂದ ಬಿಗ್ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಈ ಘೋಷಣೆಗೆ ಅವರದ್ದೇ ಆದ ಕಾರಣಗಳಿವೆ. ಆದರೆ ಕೆಲವರು ಸುದೀಪ್ರ ಈ ಘೋಷಣೆಗೆ ಬೇರೆ ಅರ್ಥ ಕಲ್ಪಿಸುವ ಪ್ರಯತ್ನ ಮಾಡಿದ್ದರು. ಅದೇ ಕಾರಣಕ್ಕೆ ಸುದೀಪ್ ಈಗ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕಲರ್ಸ್ ವಾಹಿನಿಯಿಂದ, ಬಿಗ್ಬಾಸ್ ಆಯೋಜಕರಿಂದ ಕಿಚ್ಚ ಸುದೀಪ್ಗೆ ಅವಮಾನ ಆಗಿದೆ ಹಾಗಾಗಿ ಅವರು ಈ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳನ್ನು ಹಂಚಿಕೊಂಡಿದ್ದರು. ಇದರ ಬಗ್ಗೆ ಸ್ವತಃ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಟ್ವೀಟ್ ನೋಡಿ, ಗೌರವಿಸಿ ಬಂದ ಪ್ರೀತಿ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ. ಇದು ನಿಜವಾಗಿಯೂ ನನಗೆ ಸ್ಪೂರ್ತಿ ತುಂಬುತ್ತದೆ. ಈ ಪ್ರೀತಿ ಗೌರವವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ’ ಎಂದಿದ್ದಾರೆ.
ಮುಂದುವರೆದು, ‘ನನ್ನ ಹಾಗೂ ಚಾನೆಲ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ, ನನಗೆ ಅಗೌರವವನ್ನು ಚಾನೆಲ್ ತೋರಿದೆ ಎಂದು ವಿಡಿಯೋ, ಕಮೆಂಟ್ ಮಾಡುವವರಿಗೆ ನಾನು ಹೇಳಬಯಸುವುದೆಂದರೆ, ನಾನು ಮತ್ತು ಚಾನೆಲ್ ದೀರ್ಘವಾದ ಹಾಗೂ ಧನಾತ್ಮಕವಾದ ಜರ್ನಿ ಮಾಡಿದ್ದೇವೆ. ಭಿನ್ನಾಭಿಪ್ರಾಯ, ಅಗೌರವ ಎಂಬುದೆಲ್ಲ ಸುಳ್ಳು, ಸಾಕ್ಷ್ಯ ಇಲ್ಲದ್ದು. ಬಿಗ್ಬಾಸ್ನಿಂದ ಹೊರಹೋಗುತ್ತಿರುವ ಕುರಿತು ಮಾಡಿದ ಟ್ವೀಟ್ ಸ್ಪಷ್ಟವಾಗಿತ್ತು ಮತ್ತು ನೇರವಾಗಿತ್ತು, ಕಲರ್ಸ್ ವಾಹಿನಿಯೊಟ್ಟಿಗೆ ನನ್ನ ಸಂಬಂಧ ಅದ್ಭುತವಾಗಿದೆ ಮತ್ತು ಅವರು ಯಾವಾಗಲೂ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಈಗಿನ ನಿರ್ದೇಶಕ ಪ್ರಕಾಶ್, ಅಸಾಧ್ಯ ಪ್ರತಿಭಾವಂತ ಮತ್ತು ಶಕ್ತಿಯುತ ವ್ಯಕ್ತಿ ಮತ್ತು ನಾನು ಅವರ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಇಲ್ಲದ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸುವ ವ್ಯಕ್ತಿತ್ವ ನನ್ನದಲ್ಲ’ ಎಂದಿದ್ದಾರೆ ಸುದೀಪ್.
ಕಿಚ್ಚ ಸುದೀಪ್, ತಾವು ಬಿಗ್ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಕೆಲ ದಿನಗಳ ಹಿಂದೆಯಷ್ಟೆ ಘೋಷಣೆ ಮಾಡಿದ್ದಾರೆ. ಸುದೀಪ್ರ ಈ ಹಠಾತ್ ಘೋಷಣೆ ಅವರ ಅಭಿಮಾನಿಗಳಲ್ಲಿ, ಬಿಗ್ಬಾಸ್ ವೀಕ್ಷಕರಲ್ಲಿ ಮತ್ತು ಮಾಜಿ ಬಿಗ್ಬಾಸ್ ಸ್ಪರ್ಧಿಗಳಿಗೆ ಆಘಾತ ಉಂಟು ಮಾಡಿತ್ತು. ಇದೇ ಸಂದರ್ಭದಲ್ಲಿ ಕೆಲ ಮಾಜಿ ಬಿಗ್ಬಾಸ್ ಸ್ಪರ್ಧಿಗಳು ಕಲರ್ಸ್ ವಾಹನಿಯಿಂದ ಸುದೀಪ್ಗೆ ಅವಮಾನ ಆಗಿದೆಯೇ ಎಂಬ ಅನುಮಾನವನ್ನು ಸಹ ವ್ಯಕ್ತಪಡಿಸಿದ್ದರು. ಅದೇ ಕಾರಣಕ್ಕೆ ಸುದೀಪ್ ಇದೀಗ ಸ್ಪಷ್ಟನೆ ನೀಡುವ ಮೂಲಕ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.