ಕಿಚ್ಚ ಸುದೀಪ್ ತಾಯಿ ಸರೋಜ ಕಳೆದ ಕೆಲ ದಿನಗಳ ಹಿಂದಷ್ಟೇ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಘಟನೆಯ ಬಳಿಕ ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಸುದೀಪ್ ಬ್ರೇಕ್ ತೆಗೆದುಕೊಂಡಿದ್ದರು. ಹಾಗಾಗಿ ಅ.26 ಮತ್ತು ಅ.27ರ ಸಂಚಿಕೆಯನ್ನು ನಡೆಸಿಕೊಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಈ ವಾರ (ನವೆಂಬರ್ 2 ಮತ್ತು 3) ವೀಕೆಂಡ್ ಸಂಚಿಕೆಗೆ ಅವರು ನಿರೂಪಣೆ ಮಾಡಿದ್ದು, ನಗುನಗುತ್ತಲೇ ಭಾನುವಾರದ ಎಪಿಸೋಡ್ ನಡೆಸಿಕೊಟ್ಟಿದ್ದಾರೆ.
ಶನಿವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಅವರ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂಚಿಕೆ ಸ್ವಲ್ಪ ಎಮೋಷನಲ್ ಆಗಿತ್ತು. ಹಾಡಿನ ಮೂಲಕ ವಾಸುಕಿ ವೈಭವ್ ಅವರು ಸರೋಜಾ ಸಂಜೀವ್ ಅವರಿಗೆ ನಮನ ಸಲ್ಲಿಸಿದರು. ಆ ಕ್ಷಣದಲ್ಲಿ ಸುದೀಪ್ ಭಾವುಕರಾದರು. ದೊಡ್ಮನೆಯೊಳಗೆ ಇರುವ ಸ್ಪರ್ಧಿಗಳು ಕೂಡ ಕಣ್ಣೀರು ಹಾಕಿದರು. ಆದರೆ ಭಾನುವಾರ ವಾತಾವರಣ ಬದಲಾಯಿತು.
ತಾಯಿಯನ್ನು ಕಳೆದುಕೊಂಡ ನೋವು ಸುದೀಪ್ ಅವರ ಮನದಲ್ಲಿ ಇದೆ. ಆ ನೋವನ್ನು ಮರೆಯುಲು ಸಾಧ್ಯವಿಲ್ಲ. ಹಾಗಂತ ತಮ್ಮ ಕೆಲಸದ ಮೇಲೆ ಆ ನೋವಿನಿಂದ ಪರಿಣಾಮ ಬೀರುವುದು ಸುದೀಪ್ ಅವರಿಗೂ ಇಷ್ಟವಿಲ್ಲ. ಎದೆಯೊಳಗೆ ಬೆಟ್ಟದಷ್ಟು ನೋವು ಇದ್ದರೂ ಭಾನುವಾರದ ಎಪಿಸೋಡ್ ಅನ್ನು ನಗುವಿನಿಂದಲೇ ತುಂಬಿದ್ದರು. ಇಂದಿನ ಸಂಚಿಕೆಯಲ್ಲಿ ನಗೋಣ, ನಗಿಸೋಣ ಎನ್ನುತ್ತಲೇ ಅವರು ಎಪಿಸೋಡ್ ಆರಂಭಿಸಿದರು.
ದೊಡ್ಮನೆಯೊಳಗೆ ಎಲ್ಲರಿಗೂ ನಗು ಮೂಡಿಸುವ ರೀತಿಯ ಕೆಲಸ ಟಾಸ್ಕ್ಗಳನ್ನು ಸುದೀಪ್ ಅವರು ನೀಡಿದರು. ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಟೆನ್ಷನ್ ಇದ್ದರೂ ಕೂಡ ಅದನ್ನು ಮರೆಯುವ ರೀತಿಯಲ್ಲಿ ನಗು ತುಂಬಿಸಿದರು ಸುದೀಪ್. ಧನರಾಜ್, ಹನುಮಂತ, ಉಗ್ರಂ ಮಂಜು ಮುಂತಾದವರಿಂದ ಕಾಮಿಡಿ ಮಾಡಿಸಿದರು. ಹನುಮಂತ ಮತ್ತು ಚೈತ್ರಾ ಕುಂದಾಪುರ ಅವರಿಂದಲೂ ಸುದೀಪ್ ಡ್ಯಾನ್ಸ್ ಮಾಡಿಸಿದರು. ತನ್ನೊಳಗಿನ ನೋವನ್ನು ನುಂಗಿ ಸುದೀಪ್ ಬೇರೆಯವರ ಮುಖದಲ್ಲಿ ನಗು ಮೂಡಿಸಿದರು.