ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಜೊತೆಗೆ ನಿರ್ದೇಶಕ ಹಾಗೂ ನಿರೂಪಕರಾಗಿಯೂ ಖ್ಯಾತಿ ಘಳಿಸಿದ್ದಾರೆ.ಸುದೀಪ್ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಸುದೀಪ್ ಅವರ ಸಮಾಜಮುಖಿ ಕೆಲಸವನ್ನು ಗುರುತಿಸಿ ತುಮಕೂರು ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ, ಇದನ್ನು ಕಿಚ್ಚ ಸುದೀಪ್ ನಯವಾಗಿ ನಿರಾಕರಿಸಿದ್ದಾರೆ.
ಕಿಚ್ಚ ಸುದೀಪ್ಗೆ ಗೌರವ ಡಾಕ್ಟರೇಟ್ ನೀಡಲು ತುಮಕೂರು ವಿವಿ ನಿರ್ಧರಿಸಿತ್ತು. ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಸಿ ಸುದೀಪ್ ಗಮನಕ್ಕೆ ತರಲಾಗಿತ್ತು. ವಿವಿ ನಿರ್ಧಾರಕ್ಕೆ ಹೃದಯಪೂರ್ವಕ ಧನ್ಯವಾದ ತಿಳಿಸಿರುವ ಸುದೀಪ್ ಅವರು, ಇದನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ. ‘ಸಮಾಜದಲ್ಲಿ ಸೇವೆ ಮಾಡಿದ ನನಗಿಂತ ಹಿರಿಯರು ಇದ್ದಾರೆ. ಅವರಿಗೆ ಡಾಕ್ಟರೇಟ್ ನೀಡಿ’ ಎಂದು ಸುದೀಪ್ ಕೋರಿದ್ದಾರೆ.
ಮನೋರಂಜನೆ ಹಾಗೂ ನಟನೆಯಲ್ಲಿ ಸುದೀಪ್ ಸಲ್ಲಿಸಿದ ಸೇವೆ ಗುರುತಿಸಿ ಈ ಗೌರವ ನೀಡಲು ನಿರ್ಧರಿಸಿಲಾಗಿತ್ತು. ಈ ಬಗ್ಗೆ ಸುದೀಪ್ ಪಿಎ ಮುಖಾಂತರ ಮಾಹಿತಿ ರವಾನಿಸಲಾಗಿತ್ತು. ಆದರೆ, ಇದನ್ನು ನಿರಾಕರಿಸಿರುವುದಾಗಿ ಸುದೀಪ್ ತಿಳಿಸಿದ್ದರು.
ಆಗಸ್ಟ್ 17ರಂದು ತುಮಕೂರು ವಿವಿ ಆವರಣದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ನಡೆಯಲಿದೆ. ಈ ಬಾರಿ ತುಮಕೂರು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ. ಜಲಕ್ರೀಡಾ ಸಾಹಸಿಗ ಮತ್ತು ಸಾಮಾಜಿಕ ಕಾರ್ಯಕರ್ತ ಸಿ.ಎಸ್. ನಾಗಾನಂದನ ಸ್ವಾಮಿ, ಕೈಗಾರಿಕೋದ್ಯಮಿ ಎಚ್. ಜಿ.ಚಂದ್ರಶೇಖರ್, ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಾಕ್ಟರೇಟ್ ಪ್ರಧಾನ ಮಾಡಲಿದ್ದಾರೆ.