ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಇಂದು ಮುಂಜಾನ ಸರೋಜ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸರೋಜ ಅವರ ಮೃತದೇಹವನ್ನು ಮಧ್ಯಾಹ್ನ 12 ಗಂಟೆಗೆ ಸುದೀಪ್ ಅವರ ಜೆಪಿ ನಗರ ನಿವಾಸಕ್ಕೆ ತರಲಾಗುವುದು, ಜೆಪಿ ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಲಿದೆ. ಸುದೀಪ್ ಅವರ ತಾಯಿಯವರು ಕಳೆದ ಕೆಲ ದಿನಗಳಿಂದಲೂ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಜಯನಗರದ ಅಪೋಲೊ ಆಸ್ಪತ್ರೆಗೆ ಸುದೀಪ್ ಅವರ ತಾಯಿಯನ್ನು ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 07:04 ಕ್ಕೆ ಸುದೀಪ್ರ ತಾಯಿ ನಿಧನ ರಾಗಿದ್ದಾರೆ. ತಾಯಿಯ ಅನಾರೋಗ್ಯದ ಕಾರಣಕ್ಕೆ ನಿನ್ನೆ ಬಿಗ್ಬಾಸ್ ಶೂಟಿಂಗ್ ಅನ್ನು ಬೇಗನೆ ಮುಗಿಸಿ ಹೋಗಿದ್ದಾರೆ ಸುದೀಪ್. ನಿನ್ನೆಯ ವಾರದ ಪಂಚಾಯಿತಿ, ಸಾಮಾನ್ಯಕ್ಕಿಂತಲೂ ಕಡಿಮೆ ಅವಧಿಗೆ ಪ್ರಸಾರವಾಗಿತ್ತು.
ಇತ್ತೀಚೆಗಷ್ಟೆ ಬಿಗ್ಬಾಸ್ ವೇದಿಕೆ ಮೇಲೆ ಸುದೀಪ್ ಅವರು ಅವರ ತಾಯಿಯನ್ನು ನೆನಪಿಸಿಕೊಂಡಿದ್ದರು. ಈ ಸೀಸನ್ನ ಮೊದಲ ವೀಕೆಂಡ್ ಪಂಚಾಯಿತಿಗೆ ಬಂದಿದ್ದ ಸುದೀಪ್ ಶೇರವಾನಿ ಹಾಕಿಕೊಂಡು ಬರಿಗಾಲಲ್ಲಿ ವೇದಿಕೆಗೆ ಹತ್ತಿದ್ದರು. ನವರಾತ್ರಿ ಇದ್ದ ಕಾರಣ ತಾವು ಹೀಗೆ ಡ್ರೆಸ್ ಮಾಡಿಕೊಂಡು ಬಂದಿದ್ದಾಗಿ ಹೇಳಿದ ಸುದೀಪ್, ಕ್ಯಾಮೆರಾ ನೋಡಿಕೊಂಡು ‘ಅಮ್ಮ ನೋಡಿ, ಬರಿಗಾಲಲ್ಲಿ ಬಂದಿದ್ದೀನಿ, ಹಬ್ಬಕ್ಕೆ ತಕ್ಕಂತೆ ಡ್ರೆಸ್ ಮಾಡಿಕೊಂಡಿದ್ದೀನಿ’ ಎಂದಿದ್ದರು.