ಬೆಂಗಳೂರು:ಕರ್ನಾಟಕ ವಿಧಾನಸಭೆ ಚುನಾವಣಗೆ 3 ದಿನ ಮಾತ್ರ ಬಾಕಿ ಉಳಿದಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13 ರಂದು ಮತ ಎಣಿಕೆ ಆರಂಭವಾಗಲಿದೆ. ನಾಳೆ (ಮೇ.08) ರಂದು ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಹಿನ್ನೆಲೆ ಮೂರು ಪಕ್ಷಗಳು ಅಂತಿಮ ಹಂತದ ಕಸರತ್ತು ನಡೆಸಿವೆ. ಬಜೆಪಿ ಮತ್ತು ಕಾಂಗ್ರೆಸ್ನ ರಾಜ್ಯ ಮತ್ತು ರಾಷ್ಟ್ರ ನಾಯಕರು ಅಬ್ಬರದ ಪ್ರಚಾರ ನಡೆಸಿದ್ದಾರೆ.
ಅಭ್ಯರ್ಥಿಗಳ ಪರವಾಗಿ ಸ್ಟಾರ್ ಪ್ರಚಾರಕರು ಪ್ರಚಾರ ಕಾರ್ಯವನ್ನು ಜೋರಾಗಿಯೇ ನಡೆಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯವನ್ನು ಮಾಡುವುದಾಗಿ ಹೇಳಿದ್ದ ಸುದೀಪ್ (Sudeep) ಭಾನುವಾರ ಸಚಿವ ಮುನಿರತ್ನ (Munirathna) ಪರವಾಗಿ ಪ್ರಚಾರ ನಡೆಸಿದ್ದಾರೆ. ರಾಜರಾಜೇಶ್ವರಿನಗರದ (Rajarajeshwari Nagar) ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಪರ ನಟ ಸುದೀಪ್ ಭಾನುವಾರ ನಗರದ ಮಾಳಗಾಳ ಗ್ರಾಮದಲ್ಲಿ ಮತ ಪ್ರಚಾರ ನಡೆಸಿದ್ದಾರೆ.
ಜ್ಞಾನಭಾರತಿ ವಾರ್ಡ್, ರಾಜರಾಜೇಶ್ವರಿ ನಗರ ವಾರ್ಡ್ ಸೇರಿದಂತೆ ಅನೇಕ ಕಡೆ ಮತ ಪ್ರಚಾರ ಮಾಡಿದ್ದಾರೆ. ಸುದೀಪ್ರನ್ನು ಮುನಿರತ್ನ ತಮ್ಮ ಕ್ಷೇತ್ರಕ್ಕೆ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ.ಕಳೆದ ತಿಂಗಳು ಸುದೀಪ್ ಬೊಮ್ಮಾಯಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವಂತೆ ಮತದಾರರಲ್ಲಿ ಕೇಳಿಕೊಂಡು ಪ್ರಚಾರ ಕಾರ್ಯಗಳನ್ನು ಪ್ರಾರಂಭಿಸಿದರು. ತಾವು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದ ಸುದೀಪ್, ಸಿಎಂ ತಿಳಿಸಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯಗಳನ್ನು ನಡೆಸುವುದಾಗಿ ತಿಳಿಸಿದ್ದರು.