ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಜೋರಾಗಿದೆ. ಈಗಾಗಲೇ ಎಲ್ಲಾ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು ರಾಜಕೀಯಕ್ಕೆ ಕಲಾವಿದರ ಎಂಟ್ರಿಯ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಈ ಮಧ್ಯೆ ಸುದೀಪ್ ರಾಜಕೀಯ ಎಂಟ್ರಿಯ ಕುರಿತು ಮಾಹಿತಿ ಹೊರ ಬಿದ್ದಿದೆ.
ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರಿಗೆ ಹಲವು ಪ್ರಮುಖ ಮುಖಂಡರ ಜೊತೆ ಒಡನಾಟ ಇದೆ. ಅವರನ್ನು ರಾಜಕೀಯಕ್ಕೆ ಕರೆತರಲು ಸಾಕಷ್ಟು ಪ್ರಯತ್ನಗಳು ಕೂಡ ನಡೆದಿವೆ. ಮೂಲಗಳ ಪ್ರಕಾರ ಸುದೀಪ್ ಬಿಜೆಪಿ ಜೊತೆ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಶೀಘ್ರದಲ್ಲೇ ಸ್ಪಷ್ಟ ಚಿತ್ರಣ ಸಿಗಲಿದೆ. ಸುದೀಪ್ ಅವರು ನೇರವಾಗಿ ರಾಜಕೀಯಕ್ಕೆ ಧುಮುಕುತ್ತಾರೋ ಅಥವಾ ಕೇವಲ ಬಿಜೆಪಿ ಪರವಾಗಿ ಪ್ರಚಾರ ರಾಯಭಾರಿ ಆಗುತ್ತಾರೋ ಎಂಬುದು ಏಪ್ರಿಲ್ 5ರಂದು ಬಹಿರಂಗ ಆಗಲಿದೆ.
ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಜೊತೆ ಕಿಚ್ಚ ಸುದೀಪ್ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸುದೀಪ್ ಅವರಿಂದ ಬೆಂಬಲ ಪಡೆಯಬೇಕು ಎಂಬುದು ಕಾಂಗ್ರೆಸ್ ಮತ್ತು ಬಿಜೆಪಿಯ ಉದ್ದೇಶ ಆಗಿತ್ತು. ಪಕ್ಷಕ್ಕೆ ಸೇರ್ಪಡೆ ಆಗುವಂತೆ ಎರಡೂ ಕಡೆಯಿಂದ ಅವರಿಗೆ ಆಹ್ವಾನ ನೀಡಲಾಗಿತ್ತು. ಅಂತಿಮವಾಗಿ ಸುದೀಪ್ ಅವರು ಬಿಜೆಪಿ ಪರ ಆಸಕ್ತಿ ತೋರಿಸುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.