ಮುಂಗಡ ಹಣ ಪಡೆದು ಸಿನಿಮಾ ಮಾಡುತ್ತಿಲ್ಲ ಎಂಬ ನಿರ್ಮಾಪಕ ಕುಮಾರ್ ಅವರ ಆರೋಪಕ್ಕೆ ಕಿಚ್ಚ ಸುದೀಪ್ ಅವರು ಬೇಸರ ಹೊರ ಹಾಕಿದ್ದಾರೆ.
ನಿನ್ನೆಯಷ್ಟೇ ನಿರ್ಮಾಪಕ ಜಾಕ್ ಮಂಜು ಅವರು ಸುದೀಪ್ ಅವರ ಮೇಲೆ ಹೊರಿಸಿರುವ ಆರೋಪದ ಬಗ್ಗೆ ನಾವು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಕಿಚ್ಚ ಸುದೀಪ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.
ಎಲ್ಲರಿಗೂ ನಮಸ್ಕಾರ! ಕನ್ನಡ ಚಿತ್ರರಂಗ ಮಹಾನ್ ಸಾಧಕರಿಂದ ಬೆಳೆದು ನಿಂತಿದೆ. ಅವರೆಲ್ಲರ ಸಾಧನೆಯ ನಡುವೆ, ನನ್ನದೂ ಒಂದು ಅಳಿಲು ಸೇವೆ ಇದೆ. ಅಂತಹ ಮಹಾನ್ ಸಾಧಕರೆದುರು ನಾನು ತುಂಬಾ ಕಿರಿಯ. ಈ ಕಳೆದ 27 ವರ್ಷಗಳಲ್ಲಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಕಲಾವಿದನಾಗಿ, ಬರಹಗಾರ, ಗಾಯಕನಾಗಿ ನಾನು ಈ ಪತ್ರವನ್ನು ನಿಮಗೆ ಬರೆಯುತ್ತಿಲ್ಲ. ಚಿತ್ರೋದ್ಯಮದಲ್ಲಿ ಈ 27 ವರ್ಷಗಳ ಕಾಲ ಕಾಪಾಡಿಕೊಂಡು ಬಂದ ಒಳ್ಳೆಯತನ ಮತ್ತು ಮಾನವೀಯತೆ ಆಧಾರದಲ್ಲಿ, ಈ ಮೇಲ್ಕಂಡ ಸಂಸ್ಥೆಗಳ ಮೇಲಿನ ಗೌರವಾಧಾರದ ಮೇಲೆ ಈ ಪತ್ರ ಬರೆಯುತ್ತಿದ್ದೇನೆ.
ವಾಣಿಜ್ಯ ಮಂಡಳಿಗೆ ನಿರ್ಮಾಪಕರೊಬ್ಬರು ಮೊರೆ ಬಂದಿರುವುದು ಸರಿ ಅಷ್ಟೇ. ಸ್ಪಂದಿಸಬೇಕಾದದ್ದು ನಿಮ್ಮ ಕರ್ತವ್ಯ, ನೀವು ಸ್ಪಂದಿಸಿದ್ದೀರಿ. ಆ ಬಗ್ಗೆ ನನಗೆ ಯಾವುದೂ ತಕರಾರು ಇರುವುದಿಲ್ಲ. ಆದರೂ, ಯಾವುದೇ ನಿರ್ಮಾಪಕರು, ಯಾರೇ ಕಲಾವಿದರ ತಂತ್ರಜ್ಞರ ಮೇಲೆ ನಿರಾಧಾರ ಸುಳ್ಳು ಆರೋಪಗಳನ್ನು ಮಾಡುವಾಗ, ಕನಿಷ್ಠ ದಾಖಲಾತಿಗಳನ್ನು ಪರಿವೀಕ್ಷಿಸುವುದು ಮಾತೃ ಸಂಸ್ಥೆಗಳಾದ ನಿಮ್ಮದೂ ಜವಾಬ್ದಾರಿ ಆಗಿರುತ್ತದೆ ಎಂದು ವಿನಮ್ರತೆಯಿಂದ ಮನವಿ ಮಾಡುತ್ತೇನೆ. ಈ ಹಿಂದೆ ನೀವು ಇದನ್ನೆಲ್ಲ ಪರಿಶೀಲಿಸಲಿಲ್ಲ ಎಂದಲ್ಲ. ಈ ಬಾರಿ ನನ್ನ ವಿಚಾರದಲ್ಲಿ ಅದೇಕೋ ನಡೆಯುತ್ತಿಲ್ಲ, ಕಾರಣವೂ ನನಗೆ ತಿಳಿಯುತ್ತಿಲ್ಲ.
ಅಲ್ಲದೇ, ಈಗಾಗಲೇ ಒಂದು ಪತ್ರದ ಮೂಲಕ ಮತ್ತು ನನ್ನ ಮನೆಯಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ, ನನ್ನ ಕಡೆಯಿಂದ ಕೊಡಬೇಕಾದ ಅಷ್ಟೂ ವಿವರಣೆಗಳನ್ನು ಅತ್ಯಂತ ಸಂಯಮದಿಂದ ತಮ್ಮ ಮುಂದೆ ಇಟ್ಟಿದ್ದೇನೆ. ಆ ಬಗ್ಗೆ ಬಹಿರಂಗವಾಗಿ ವಿವರಿಸುವುದಾದರೆ ಎಂ.ಎನ್. ಕುಮಾರ್ ಅವರನ್ನು ನಾನು ಹಲವು ಬಾರಿ ಮುಖತಃ ಭೇಟಿಯಾಗಿದ್ದೇನೆ. ಒಂದು ಅನುಕಂಪದ ಆಧಾರದಲ್ಲಿ ಅವರಿಗೆ ಸಹಾಯ ಮಾಡಲು ಪುಯತ್ನಿಸಿದ್ದೇನೆ. ನಾನೆಷ್ಟೇ ಪ್ರಯತ್ನ ಪಟ್ಟರೂ ಅವರ ಹಲವಾರು ಕಾರಣಗಳಿಂದ ಸಾಧ್ಯವಾಗಲಿಲ್ಲ. ಅವರು ನನ್ನ ವಿರುದ್ಧ ವದಂತಿಗಳನ್ನು ಹಬ್ಬಿಸಲು ಶುರುಮಾಡಿದಾಗ ಕುಮಾರ್ ಅವರನ್ನು ಮುಖತಃ ಭೇಟಿಯಾಗುವುದನ್ನು ನಿಲ್ಲಿಸಿದೆ.
ಇದೆಲ್ಲವನ್ನೂ ತಮಗೆ ವಿವರಿಸಿದೆ. ಅದಾದ ನಂತರವೂ, ಮಂಡಳಿಯ ಕಚೇರಿಯಲ್ಲಿ, ನನ್ನ ವಿರುದ್ಧ ಸುಳ್ಳು, ನಿರಾಧಾರ ಆರೋಪಗಳ ಪತ್ರಿಕಾಗೋಷ್ಠಿ ನಡೆಯಿತು. ಆ ಅಭಿವ್ಯಕ್ತಿ ಸ್ವಾತಂತ್ರವನ್ನೂ ನಾನು ಗೌರವಿಸುತ್ತೇನೆ. ಜೊತೆಗೆ, ಸಂಧಾನ ಎಂಬ ಮಹತ್ತರ ಬೆಳವಣಿಗೆಯ ಪದವೊಂದು ಹುಟ್ಟಿಕೊಂಡಿತು. ಸಂಧಾನ ಎಂದರೇನು? ಆ ನಿರ್ಮಾಪಕರು, ಅವರೆಲ್ಲಾ ಕಷ್ಟಗಳಿಗೆ, ನನ್ನನ್ನೇ ಹೊಣೆಗಾರನನ್ನಾಗಿಸಿ, ಬಲವಂತವಾಗಿ ಹಣ ಪಡೆಯುವುದು. ನಾನು ಈ ಸುದೀರ್ಘ ವರ್ಷಗಳ ಕಾಲ ಕಾಪಾಡಿಕೊಂಡು ಬಂದ ನೈತಿಕತೆ, ಹೊಣೆಗಾರಿಕೆ, ವ್ಯಕ್ತಿತ್ವದ ಕಾರಣಕ್ಕೆ, ಹಣ ಕೊಡಬೇಕಾಗಿಲ್ಲ ಎಂಬ ನನ್ನ ನಿಲುವಿಗೆ ನಾನು ಬದ್ಧವಾಗುವುದು.
27 ವರ್ಷಗಳ ಕಾಲ ನಾನು ಎಂದಾದರೂ ಒಂದೇ ಒಂದು ಕಪ್ಪು ಚುಕ್ಕೆ ಬೀಳುವಂತೆ ನಡೆದುಕೊಂಡಿಲ್ಲ. 80 ವರ್ಷಗಳ ಕಾಲ ಚಿತ್ರರಂಗದ ರಥ ಎಳೆದು ಬಂದಿರುವುದು, ಈ ನಂಬಿಕೆ ಎಂಬ ಹಗ್ಗದ ಮೇಲೆಯೇ. ಆ ನಂಬಿಕೆಯ ಹಗ್ಗದ ಮೇಲೆಯೇ ನಾನು ವಿಶೇಷ ಪಾತ್ರಗಳನ್ನು ಹೊರತು ಪಡಿಸಿ 45 ಸಿನಿಮಾಗಳಲ್ಲಿ ದಾಖಲೆಯಾಗಿ ಉಳಿದಿದ್ದೇನೆ. ನನಗೂ ಬಹುಪಾಲು ನಿರ್ಮಾಪಕರಿಂದ ಹಣ ಬರಬೇಕಿದೆ. ಎಂದಾದರೂ ಮಂಡಳಿಯ ಕದ ತಟ್ಟಿದ್ದೇನೆಯೇ? ಈವರೆಗೂ ಈ ನಿಮ್ಮ ಪ್ರೀತಿಯ ಸುದೀಪ್ ಒಳ್ಳೆತನಕ್ಕೆ ಉದಾಹರಣೆ ಆಗಿದ್ದಾನೆ ಹೊರತು ಕೆಟ್ಟ ತನಕಲ್ಲ.
ಯಾಕೆ ನಿಮ್ಮ ಬಳಿ ಆಗ ಬರಲಿಲ್ಲವೆಂದರೆ, ಚಿತ್ರರಂಗದಲ್ಲಿ ಬಹುಪಾಲು ಸಂದರ್ಭಗಳಲ್ಲಿ ಬರಬೇಕಾದ ಹಣ ಬಂದಿಲ್ಲ. ಹಲವಾರು ಕಡೆ ಬಂದಿದೆ. ನಾನವರಿಗೆ ಋಣಿ ಆಗಿದ್ದೇನೆ. ಕೆಲವರು ತಲೆ ಮರೆಸಿಕೊಂಡಿದ್ದಾರೆ. ಕೆಲವರು ವದಂತಿಗಳನ್ನು ಹಬ್ಬಿಸುವುದರಲ್ಲಿ ಕಳೆದು ಹೋಗಿದ್ದಾರೆ. ಇಂತಹ ಎಲ್ಲ ಸಂದರ್ಭಗಳು ನಡೆದಿದ್ದು ಆ ನಂಬಿಕೆಯಿಂದಲೇ. ದಾಖಲೆಗಳಿದ್ದಲ್ಲಿ ತಮ್ಮ ಬಳಿ ನಾನೇ ಬರುತ್ತಿದ್ದೆ. ಇಂತಹ ಸಂದರ್ಭಗಳಲ್ಲಿ ಸ್ನೇಹ, ಅನುಕಂಪ, ಪ್ರೀತಿಗೆ ತಲೆ ಬಾಗಿದ್ದೇನೆ. ಹಲವು ಬಾರಿ ನನ್ನ ದಡ್ಡತನದಿಂದ ನಾನೇ ಪಾಠ ಕಲಿತಿದ್ದೇನೆ.
ಒಂದು ಮಾತು ನಿಮ್ಮ ಪತ್ರಿಕಾಗೋಷ್ಠಿಯಲ್ಲಿ ಹೊರಬಂತು. ಅದು ನನಗೆ ತೀವ್ರ ನೋವು ಉಂಟು ಮಾಡಿತು. ದುಃಖ ಉಂಟು ಮಾಡಿತು. ಶ್ರೀಯುತ ಸುರೇಶ್ ನನಗೂ ಪರಿಚಿತರು. ಎದುರಾದಾಗ ಕುಶಲ ಕ್ಷೇಮ ಮಾತನಾಡುವಷ್ಟು ಸಲಿಗೆ ಉಳ್ಳವರು. ನಿರ್ಮಾಪಕರೂ ಆದ ಅವರು, ಓರ್ವ ನಿರ್ಮಾಪಕರ ಪರ ನಿಲ್ಲಬೇಕು ಎಂಬ ಸೀಮಿತವಾದ ಕಾರಣಕ್ಕೆ, ಕುಮಾರ್ ಅವರು ಮೂರು ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಗೇನಾದರೂ ಅವರಿಗೆ ಪ್ರಾಣಾಪಾಯವಾದರೆ, ಸುದೀಪ್ ಹೊಣೆ ಅಂದದ್ದು, ನನಗಲ್ಲ, ಇಡೀ ಸಮಾಜಕ್ಕೆ ಕೊಟ್ಟ ಅಪಾಯಕಾರಿ ಸಂದೇಶ, ಯಾವಾಗಿನಿಂದ ಕನ್ನಡ ಚಿತ್ರರಂಗದಲ್ಲಿ ಈ ಕೆಟ್ಟ ಬೆಳವಣಿಗೆ ಆರಂಭವಾಯಿತು?.ಎಂದು ಪ್ರಶ್ನಿಸುವ ಮೂಲಕ ಬೇಸರ ಹೊರ ಹಾಕಿದ್ದಾರೆ.