ಬೆಂಗಳೂರು ;- ಅಮೂಲ್ ಜೊತೆ ನಂದಿನಿ ಯಾವುದೇ ಕಾರಣಕ್ಕೂ ವಿಲೀನ ಇಲ್ಲ ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಈ ಸಂಬಂಧ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಅಮೂಲ್ ಜೊತೆ ನಂದಿನಿ ವಿಲೀನ ಪ್ರಶ್ನೆಯೇ ಇಲ್ಲ. ಆದರೆ, ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರ ಉಳಿಸುವ ಕಾರಣಕ್ಕೆ ಅನಿವಾರ್ಯವಾಗಿ ಹಾಲಿನ ದರ ಪರಿಷ್ಕರಣೆ ಮಾಡಲೇಬೇಕಿದೆ, ಸಿಎಂ ಜೊತೆ ಚರ್ಚಿಸಿ ಎಷ್ಟು ಹೆಚ್ಚಳ ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ ಎಂದರು.
ರೈತರಿಗೂ ಕಷ್ಟ ಇದೆ, ಒಕ್ಕೂಟವೂ ಕಷ್ಟದಲ್ಲಿದೆ ಹಾಗಾಗಿ ಬೇರೆಯವರ ಜೊತೆ ಸ್ಪರ್ಧೆ ಕಷ್ಟವಾಗುತ್ತಿದೆ. ಖಾಸಗಿಯವರು ಹೆಚ್ಚು ಹಣ ಕೊಡುತ್ತಿದ್ದಾರೆ. ಹಾಗಾಗಿ ಅವರಿಗೆ ರೈತರ ಹಾಲು ಹೋಗುತ್ತಿದೆ. ನಮ್ಮ ಒಕ್ಕೂಟ ನಷ್ಟದಲ್ಲಿವೆ. ಹಾಗಾಗಿ ಹಾಲಿನ ದರ ಹೆಚ್ಚಳ ಮಾಡುವ ನಿರ್ಧಾರ ಮಾಡಲಿದ್ದೇವೆ. ಎಷ್ಟು ಹೆಚ್ಚಿಸಬೇಕು ಎಂದು ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ದರ ಹೆಚ್ಚಳ ಅನಿವಾರ್ಯ ಎಂದು ಹಾಲಿನ ದರ ಹೆಚ್ಚಳದ ಸುಳಿವು ನೀಡಿದರು.
ಅಮೂಲ್ ಜೊತೆ ನಂದಿನಿ ವಿಲೀನ ಪ್ರಶ್ನೆಯೇ ಇಲ್ಲ, ಅಂತಹ ಪ್ರಸ್ತಾಪವೇ ಸರ್ಕಾರದ ಮುಂದೆ ಇಲ್ಲ. ಅವರೂ ಕೇಳೂ ಇಲ್ಲ, ನಾವು ಹೇಳಿಯೂ ಇಲ್ಲ, ಅಮೂಲ್ ಹಾಲಿನ ಮಾರುಕಟ್ಟೆ ರಾಜ್ಯದಲ್ಲಿ ತುಂಬಾ ಕಡಿಮೆ ಇದೆ. ಆನ್ ಲೈನ್ ನಲ್ಲಿ ಸಾವಿರ ಲೀಟರ್ ಮಾರಾಟ ಆಗುತ್ತಿದೆ ಅಷ್ಟೆ, ಕೆಎಂಎಫ್ಗೆ ಅಮೂಲ್ ನಿಂದ ಯಾವುದೇ ಪರಿಣಾಮ ಬೀರಿಲ್ಲ, ಖಾಸಗಿಯವರಿಗೆ ತೊಂದರೆಯಾಗಿದೆ ಅಷ್ಟೆ ಎಂದರು.