ಬೆಳಗಾವಿ: ರಾಜ್ಯದ ಕೆಎಂಎಫ್ (KMF) ನಷ್ಟದಲ್ಲಿಲ್ಲ, ಈ ವರ್ಷ 200 ಕೋಟಿ ರೂ. ಲಾಭದಲ್ಲಿದೆ. ಹೀಗಾಗಿ ಅಮುಲ್ ಜೊತೆಗೆ ನಂದಿನಿ ಯಾವುದೇ ಕಾರಣಕ್ಕೂ ವಿಲೀನ ಆಗಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಹಾಗೂ ರಾಜ್ಯದ 15 ಒಕ್ಕೂಟಗಳು ಈ ವರ್ಷ 22 ಸಾವಿರ ಕೋಟಿ ರೂ. ವಹಿವಾಟು ನಡೆಸಿವೆ. ಅದರಲ್ಲಿ ಕೆಎಂಎಫ್ಗೆ 100 ಕೋಟಿ ರೂ. ಹಾಗೂ ಇತರೇ 15 ಒಕ್ಕೂಟಗಳ ಲಾಭ 100 ಕೋಟಿ ರೂ. ಸೇರಿ 200 ಕೋಟಿ ಲಾಭದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ನಂದಿನಿ-ಅಮುಲ್ (Amul) ವಿಲೀನ ಆಗಲ್ಲ. ಬೇಕಾದಷ್ಟು ಕಂಪನಿಗಳು ಬಂದರೂ ನಂದಿನಿಗೆ (Nandini) ಯಾರೂ ಕಾಂಪಿಟೇಷನ್ ಕೊಡಲು ಆಗಲ್ಲ. 10 ಅಮುಲ್ ನಂಥ ಕಂಪನಿಗಳು ಬಂದರೂ ಅದಕ್ಕೆ ಪ್ರತಿಸ್ಪರ್ಧೆ ಒಡ್ಡಲು ನಾವು ಸಿದ್ಧರಿದ್ದೇವೆ. ರಾಜಕೀಯ (Politics) ಕಾರಣಕ್ಕೆ ಕೆಲ ರಾಜಕೀಯ ಪಕ್ಷಗಳು, ಸಂಘಟನೆಗಳು ಈ ರೀತಿ ಮಾಡುತ್ತಿವೆ. ನಮ್ಮ ಗ್ರಾಹಕರು, ರೈತರು ಹಾಗೂ ಉದ್ಯೋಗಿಗಳ ಹಿತ ಕಾಯಲು ನಾವು ಸಿದ್ಧರಿದ್ದೇವೆ. ಒಂದು ವಾರದಿಂದಲೂ ಗೊಂದಲವಿದೆ. ಈ ಗೊಂದಲ ಏಕೆ ಆಗ್ತಿದೆ ಎಂಬುದು ಗೊತ್ತಾಗ್ತಿಲ್ಲ. ನಾನು ರಾಜ್ಯದ ರೈತರು, ಗ್ರಾಹಕರಿಗೆ ಸಂದೇಶ ನೀಡುತ್ತೇನೆ, ಅಮುಲ್ ಜೊತೆಗೆ ನಂದಿನಿ ವಿಲೀನ ಆಗಲ್ಲ ಎಂದು ಬಾಲಚಂದ್ರ ಹೇಳಿದರು.