ಬೆಂಗಳೂರು: ಪ್ರಸಿದ್ಧ ತಿರುಪತಿ ತಿರುಮಲ ಲಡ್ಡು ಪ್ರಸಾದ ಕಲಬೆರಕೆ ಬೆನ್ನಲ್ಲೆ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೀಗ ತಿಮ್ಮಪ್ಪನ ಸನ್ನಿಧಿಗೆ ಎರಡು ಟ್ರಕ್ಗಳಲ್ಲಿ ಕೆಎಂಎಫ್ (KMF- Karnataka Milk Federation) ಶುದ್ಧ ನಂದಿನಿ ತುಪ್ಪ ಆಗಮಿಸಿದೆ.
ತಿರುಪತಿ (Tirupati) ತಿರುಮಲ ಲಡ್ಡು ಪ್ರಸಾದ ಕಲಬೆರಕೆ ಬೆನ್ನಲ್ಲೆ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದ್ದು, ಎರಡು ಟ್ರಕ್ಗಳಲ್ಲಿ ತಿರುಪತಿಗೆ ಕೆಎಂಎಫ್ ತುಪ್ಪ ಬಂದಿದೆ. ಒಂದು ಟ್ರಕ್ ಯಲಹಂಕ ಮದರ್ ಡೈರಿಯಿಂದ (Yalahanka Mother Dairy) ಹಾಗೂ ಚನ್ನರಾಯಪಟ್ಟಣದಿಂದ (Channarayapattana) ಮತ್ತೊಂದು ಟ್ರಕ್ನಲ್ಲಿ ತುಪ್ಪ ಸರಬರಾಜಾಗಿದೆ.
ಸುಮಾರು 26 ಟನ್ ತುಪ್ಪ 2 ಟ್ರಕ್ಗಳಲ್ಲಿ ಆಗಮಿಸಿದ್ದು, ಲಡ್ಡು ವಿವಾದದ ಮಧ್ಯೆ ಕೆಎಂಎಫ್ ನಂದಿನಿ ತುಪ್ಪ ಸರಬರಾಜಾಗಿದೆ. ಸದ್ಯ ತಿರುಪತಿಗೆ ಆಗಮಿಸಿರುವ ಟ್ರಕ್ಗಳು ಮಂಗಳವಾರ ರಾತ್ರಿ ತಿರುಮಲಕ್ಕೆ ತಲುಪಲಿವೆ. ಇದರ ಬೆನ್ನಲ್ಲೇ ಮತ್ತಷ್ಟು ನಂದಿನಿ ತುಪ್ಪ ಪೂರೈಸುವಂತೆ ಕೆಎಂಎಫ್ಗೆ ಟಿಟಿಡಿ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ತಿರುಪತಿ ಲಡ್ಡು ವಿವಾದದ ಬಳಿಕ ಕೆಎಂಎಫ್ ನಂದಿನಿ ತುಪ್ಪದ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿದೆ.
ಕೆಎಂಎಫ್ ತನ್ನ ಗುಣಮಟ್ಟದಲ್ಲಿ ಯಾವುದೇ ಲೋಪವಾಗದಂತೆ ಹಾಗೂ ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಮಾರ್ಗ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ತುಪ್ಪದ ಟ್ಯಾಂಕರ್ಗಳಿಗೆ ಜಿಪಿಎಸ್, ಎಲೆಕ್ಟ್ರಿಕ್ ಲಾಕಿಂಗ್ ಅಳವಡಿಸಿದೆ.
ದಿನಕ್ಕೆ ಒಂದು ಟ್ಯಾಂಕರ್ನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ. ಲ್ಯಾಬ್ ಟೆಸ್ಟ್ ಮಾಡಿದ ಬಳಿಕ ನಂದಿನ ತುಪ್ಪ ಪೂರೈಸಲಾಗುತ್ತಿದೆ. ವಿಶೇಷತೆ ಎಂದರೆ ತುಪ್ಪ ಇರುವ ಟ್ಯಾಂಕರ್ ಒಮ್ಮೆ ಲಾಕ್ ಆದ್ರೆ ಮತ್ತೇ ಟಿಟಿಡಿಯಲ್ಲಿಯೇ ಓಪನ್ ಮಾಡಲಾಗುತ್ತದೆ. ಟಿಟಿಡಿಯಲ್ಲಿ ಓಪನ್ ಮಾಡಬೇಕು ಅಂದ್ರೆ ಪಾಸ್ ವರ್ಡ್ ಕಡ್ಡಾಯ. ಟ್ಯಾಂಕರ್ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಕೆಎಂಎಫ್ ಅಧಿಕಾರಿಗಳಿಗೆ ಒಟಿಪಿ ರವಾನೆಯಾಗುತ್ತದೆ. ಒಟಿಪಿ ನಂಬರ್ ಹೇಳಿದರೆ ಮಾತ್ರ ಓಪನ್ ಆಗುತ್ತದೆ. ಈ ಪ್ರಕ್ರಿಯೆಗೆ ಕೆಎಂಎಫ್ ಸಿಬ್ಬಂದಿಯನ್ನು ನೇಮಕ ಮಾಡಿ ಟ್ರಕ್ ಜೊತೆಗೆ ಕಳುಹಿಸಿಕೊಡಲಾಗಿದೆ.