ಬೆಂಗಳೂರು: ಕರ್ನಾಟಕ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿರುವ ಗುಜರಾತಿನ ಅಮುಲ್ ನಡೆ ವಿರುದ್ಧ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ”ಸುಮಾರು ಅರ್ಧ ಶತಮಾನಗಳಷ್ಟು ಕಾಲ ರಾಜ್ಯದ ಮನ ಗೆದ್ದಿರುವ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮತ (ಕೆಎಂಎಫ್)ವನ್ನು ಗುಜರಾತ್ನ ಅಮುಲ್ನೊಂದಿಗೆ ವಿಲೀನಗೊಳಿಸುವ ಹುನ್ನಾರದ ಮೊದಲ ಹೆಜ್ಜೆ ಇದು,” ಎಂದೇ ಬಹುತೇಕರ ಅನುಮಾನ.
ಕ್ವಿಕ್ ಕಾಮರ್ಸ್ ಪ್ಲಾಟ್ಫಾರ್ಮ್ ಮೂಲಕ ಹಾಲು ಮತ್ತು ಮೊಸರು ಮಾರಾಟ ಆರಂಭಿಸಲು ಅಮುಲ್ ಸಂಸ್ಥೆ ಮುಂದಾಗಿರುವುದು ರಾಜ್ಯದ ಜನರನ್ನು ಕೆರಳಿಸಿದೆ. ಐಸ್ಕ್ರೀಮ್ ಸೇರಿದಂತೆ ಹಲವು ಉತ್ಪನ್ನಗಳನ್ನು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಅಮುಲ್ಗೆ ಇದು ಬೇಕಿರಲಿಲ್ಲ ಎಂದೇ ಬಹುತೇಕರು ಅಭಿಪ್ರಾಯ ಪಡುತ್ತಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ಡಿಸೆಂಬರ್ನಲ್ಲಿ ಮಂಡ್ಯ ಜಿಲ್ಲೆ ಗೆಜ್ಜಲಗೆರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಂದಿನಿಯನ್ನು ಅಮುಲ್ನೊಂದಿಗೆ ವಿಲೀನಗೊಳಿಸುವ ಪ್ರಸ್ತಾವವನ್ನು ಸೂಕ್ಷ್ಮವಾಗಿ ಮುಂದಿಟ್ಟಿದ್ದರು. ಇದಕ್ಕೆ ಆಗಲೂ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದಾದ ಮೂರು ತಿಂಗಳಲ್ಲಿ ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ನಂದಿನಿ ಹಾಲು, ಮೊಸರು, ತುಪ್ಪದ ಕೊರತೆ ಉಂಟಾಯಿತು. ಈಗಲೂ ನಂದಿನಿ ತುಪ್ಪಕ್ಕಾಗಿ ಗ್ರಾಹಕರು ಅಲೆದಾಡುವ ಪರಿಸ್ಥಿತಿ ಇದೆ. ”ಅಮುಲ್ ಹಾಲು, ಮೊಸರು ಮಾರಾಟಕ್ಕೆ ರಾಜ್ಯದಲ್ಲಿಅವಕಾಶ ಕಲ್ಪಿಸುವ ಸಲುವಾಗಿಯೇ, ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿಸಲಾಗಿದೆಯೇ,” ಎಂಬ ಅನುಮಾನ ಮೂಡಿದೆ.
ಹೈನೋದ್ಯಮದ ದೈತ್ಯ ಸಂಸ್ಥೆಯಾಗಿರುವ ಅಮುಲ್, ಈ ಹಿಂದೆಯೂ ಕರ್ನಾಟಕದಲ್ಲಿ ಹಾಲು ಮಾರಾಟ ವಿಸ್ತರಿಸಲು ಪ್ರಯತ್ನಿಸಿತ್ತು. ಆಗಿನ ಕೆಎಂಎಫ್ ಅಧಿಕಾರಿಗಳು ಅಮುಲ್ ಪ್ರಯತ್ನಕ್ಕೆ ತಡೆಯೊಡ್ಡಿದ್ದರು. ಇದೀಗ ಸ್ವಯಂ ನಿಯಂತ್ರಣ ರೇಖೆ ದಾಟಿ ಹಾಲಿನ ಮಾರುಕಟ್ಟೆಗೆ ದಾಳಿ ಇಡಲು ಮುಂದಾಗಿದೆ.
ಕನ್ನಡ ಪರ ಸಂಘಟನೆಗಳ ವಿರೋಧ
ಅಮುಲ್ ನಡೆ ವಿರುದ್ಧ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಎಚ್ಚರಿಸಿವೆ. ಕೆಲವು ಸಂಘ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿಅಮುಲ್ ವಿರುದ್ಧ ಅಭಿಯಾನವನ್ನೂ ಆರಂಭಿಸಿದೆ. ಮತ್ತೊಂದೆಡೆ ನಂದಿನಿ ಹಾಲನ್ನೇ ಬಳಸಬೇಕೆಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ನಗರದ ಹೋಟೆಲ್ಗಳಿಗೆ ಕರೆ ಕೊಟ್ಟಿದೆ.
‘ಕನ್ನಡಿಗರು ಕಷ್ಟಪಟ್ಟು ಬೆಳೆಸಿದ ನಂದಿನಿ ಬ್ರ್ಯಾಂಡ್ ಅನ್ನು ಮುಗಿಸಲೆಂದೇ ಅಮುಲ್ ಹಾಲು, ಮೊಸರನ್ನು ರಾಜ್ಯಕ್ಕೆ ತರಲಾಗುತ್ತಿದೆ. ರಾಜ್ಯದ ರೈತರನ್ನು ಭಿಕ್ಷುಕರನ್ನಾಗಿಸುವ ಸಂಚು ನಡೆಯುತ್ತಿದೆ. ರಾಜ್ಯದಲ್ಲಿಅಮುಲ್ ಹಾಲು, ಮೊಸರು ಮಾರಾಟಕ್ಕೆ ತಡೆ ನೀಡಬೇಕು. ಇಲ್ಲವಾದಲ್ಲಿ ಆಗುವ ಅನಾಹುತಕ್ಕೆ ಸಂಸ್ಥೆಗಳೇ ಜವಾಬ್ದಾರಿಯಾಗುತ್ತವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಅಮುಲ್ನೊಂದಿಗೆ ನಂದಿನಿ ಸೇರಿದಂತೆ ದೇಶದ ನಾನಾ ಹಾಲು ಉತ್ಪಾದಕ ಸಂಸ್ಥೆಗಳನ್ನು ವಿಲೀನಗೊಳಿಸುವ ಮಾತುಗಳನ್ನು ಆಡಿದ ಬೆನ್ನಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಕೇಂದ್ರ ಸರಕಾರವೇ ಪಿತೂರಿಯ ಹಿಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಗುಜರಾತಿ ಲಾಬಿಗೆ ನಾವು ಮಣಿಯುವುದಿಲ್ಲಎಂದಿದ್ದಾರೆ.