ಹಿಂದೂ ಸಂಪ್ರದಾಯದಲ್ಲಿ ಮನೆಯ ದೇವರ ಮುಂದಿನ ಜ್ಯೋತಿ, ದೀಪ, ಮೀನಾಕ್ಷಿ ದೀಪಕ್ಕೆ ವಿಶೇಷ ಸ್ಥಾನಮಾನವಿದೆ. ದೇವರ ಮುಂದಿನ ದೀಪ ಆರದಂತೆ ಬೆಳಗ್ಗೆ, ಸಂಜೆ ಎಣ್ಣೆ ಹಾಕಿ ದೀಪ ಹಚ್ಚುತ್ತಾರೆ. ಮನೆಯಲ್ಲಿ ಶಾಂತಿ, ನೆಮ್ಮದಿ, ದೇವರಿದ್ದಾನೆ ಎಂಬ ನಂಬಿಕೆಯನ್ನು ಜ್ಯೋತಿ ನೀಡುತ್ತೆ ಆದರೆ ದೀಪದ ವಿಚಾರದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು
ದೀಪ ಬೆಳಗುವ ಮೊದಲು ನಿಮಗೆ ಈ ಸಂಗತಿ ತಿಳಿದಿರಲಿ
ದೀಪ ಹಚ್ಚಲು ಸರಿಯಾದ ಸಮಯ ಯಾವುದು ? : ಬೆಳಿಗ್ಗೆ ದೇವರಿಗೆ ಪೂಜೆ ಮಾಡಿ, ದೀಪ ಬೆಳಗಲು ಸೂಕ್ತ ಸಮಯ 5 ಗಂಟೆ. ಬೆಳಗಿನ ಜಾವ ಐದು ಗಂಟೆಯಿಂದ 10 ಗಂಟೆಯೊಳಗೆ ನೀವು ದೇವರಿಗೆ ದೀಪ ಹಚ್ಚಬೇಕು. ಬೆಳಗಿನ ಸಮಯ ಪ್ರಶಾಂತವಾಗಿರುತ್ತದೆ. ದೇವರ ಪೂಜೆಯನ್ನು ಏಕಾಗ್ರತೆಯಿಂದ ಮಾಡಲು ಸಹಾಯವಾಗುತ್ತದೆ. ಹಾಗಾಗಿ ಬೆಳಿಗ್ಗೆ ಎಷ್ಟು ಬೇಗ ನೀವು ದೇವರ ಪೂಜೆ ಮಾಡ್ತೀರೋ ಅಷ್ಟು ಒಳ್ಳೆಯದು. ಹಾಗೆಯೇ ಸಂಜೆ ಐದು ಗಂಟೆಯಿಂದ 7 ಗಂಟೆಯೊಳಗೆ ನೀವು ದೇವರ ಮುಂದೆ ದೀಪವನ್ನು ಬೆಳಗಬೇಕು.
ದೀಪ ಇಡುವ ಸರಿಯಾದ ದಿಕ್ಕು : ಪೂರ್ವ ಮತ್ತು ಉತ್ತರ ದಿಕ್ಕನ್ನು ದೀಪವನ್ನು ಇಡುವ ಮಂಗಳಕರ ದಿಕ್ಕೆಂದು ಪರಿಗಣಿಸಲಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ದೀಪ ಇಡುವುದರಿಂದ ಅನಗತ್ಯ ಹಣ ವ್ಯರ್ಥವಾಗುತ್ತದೆ. ಆದರೆ ದಕ್ಷಿಣ ದಿಕ್ಕಿನಲ್ಲಿ ಪೂರ್ವಜರಿಗೆ ದೀಪವನ್ನು ಬೆಳಗಿಸಬೇಕು.
ದೀಪವನ್ನು ಇಡುವ ಸ್ಥಳ : ಪೂಜೆ ಮಾಡುವಾಗ ದೇವರ ಮುಂದೆ ತುಪ್ಪ ಅಥವಾ ಎಣ್ಣೆಯ ದೀಪವನ್ನು ಹಚ್ಚುತ್ತೇವೆ. ಪೂಜೆ ಮಾಡುವಾಗ ನಾವು ತುಪ್ಪದ ದೀಪವನ್ನು ಹಚ್ಚುತ್ತಿದ್ದರೆ ಅದನ್ನು ನಮ್ಮ ಎಡಗಡೆ ದೇವರ ಮುಂದೆ ಇಡಬೇಕು ಮತ್ತು ತುಪ್ಪದ ದೀಪದಲ್ಲಿ ಯಾವಾಗಲೂ ಹತ್ತಿಯ ಬತ್ತಿಯನ್ನು ಬಳಸಬೇಕು ಎಂಬುದನ್ನು ನೀವು ನೆನಪಿನಲ್ಲಿಡಬೇಕು. ಮತ್ತೊಂದೆಡೆ ನಾವು ಎಣ್ಣೆಯ ದೀಪವನ್ನು ಹಚ್ಚುತ್ತಿದ್ದರೆ, ಅದನ್ನು ಯಾವಾಗಲೂ ದೇವರ ಮುಂದೆ ನಮ್ಮ ಬಲಭಾಗದಲ್ಲಿ ಇಡಬೇಕು. ಎಣ್ಣೆ ದೀಪವನ್ನು ಬೆಳಗಿಸುವಾಗ ಕೆಂಪು ದಾರವನ್ನು ಬಳಸುವುದು ಉತ್ತಮ ಎಂದು ಪರಿಗಣಿಸಲಾಗಿದೆ.
ದೀಪದ ಆಯ್ಕೆ : ಮಣ್ಣಿನ ಹಣತೆಯಲ್ಲಿ ನೀವು ದೀಪ ಹಚ್ಚುತ್ತಿದ್ದರೆ ಹಣತೆ ಬಗ್ಗೆ ಗಮನವಿರಲಿ. ಹಾಳಾದ ಅಥವಾ ಒಡೆದ ಹಣತೆಯನ್ನು ನೀವು ಬಳಸಬಾರದು. ಹಾಗೆಯೇ ಲೋಹದ ದೀಪದಲ್ಲಿ ನೀವು ಎಣ್ಣೆ ಅಥವಾ ತುಪ್ಪ ಎರಡರಲ್ಲಿ ಒಂದನ್ನು ಬಳಸಬಹುದು. ಒಂದೇ ಬತ್ತಿಯನ್ನು ಅನೇಕ ಬಾರಿ ಬಳಕೆ ಮಾಡಲಾಗುತ್ತದೆ. ಅದು ತಪ್ಪು. ಒಮ್ಮೆ ಹಾಕಿದ ಬತ್ತಿಯಲ್ಲಿ ಒಮ್ಮೆ ಮಾತ್ರ ದೀಪ ಬೆಳಗಬೇಕು. ಹಾಗೆಯೇ ದೀಪವನ್ನು ಎಂದಿಗೂ ಆರಿಸಬಾರದು.