ಚೆನ್ನೈ: ಎಂಎಸ್ ಧೋನಿ ತಾನಾಗಿಯೇ ಐಪಿಎಲ್ ನಿವೃತ್ತಿ ಬಗ್ಗೆ ಮಾತನಾಡದೇ ಇದ್ದರೂ ಪದೇ-ಪದೆ ನಿವೃತ್ತಿ ಬಗ್ಗೆ ಸಿಎಸ್ಕೆ ನಾಯಕನಿಗೆ ಪ್ರಶ್ನೆ ಕೇಳಲಾಗುತ್ತಿದೆ. ಅದೇ ರೀತಿ ಮಂಗಳವಾರ ರಾತ್ರಿ ಗುಜರಾತ್ ಟೈಟನ್ಸ್ ವಿರುದ್ಧ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಬಳಿಕ ಎಂಎಸ್ ಧೋನಿಗೆ ಮತ್ತೊಮ್ಮೆ ನಿವೃತ್ತಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಸಿಎಸ್ಕೆ ನಾಯಕ ಖಡಕ್ ಉತ್ತರ ನೀಡಿದ್ದಾರೆ.
ಗುಜರಾತ್ ಟೈನಟ್ಸ್ ವಿರುದ್ಧ 15 ರನ್ಗಳಿಂದ ಮೊದಲನೇ ಕ್ವಾಲಿಫೈಯರ್ ಪಂದ್ಯ ಗೆದ್ದ ಚೆನ್ನೈ ಸೂಪರ್ ಕಿಂಗ್ಸ, 10ನೇ ಬಾರಿ ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿತು. ಈ ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಆರಂಭಕ್ಕೆ ಚೆನ್ನೈ ಪ್ರೇಕ್ಷಕರು ಅವಕಾಶ ಮಾಡಲಿಲ್ಲ. ಧೋನಿ..ಧೋನಿ.. ಎಂದು ಕೂಗುವ ಮೂಲಕ ಮೈದಾನವನ್ನು ಧೋನಿ ಮಯ ಮಾಡಿದ್ದರು.
ಇದರ ಹೊರತಾಗಿಯೂ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಎಂಎಸ್ ಧೋನಿ, ಸದ್ಯಕ್ಕೆ ಐಪಿಎಲ್ ನಿವೃತ್ತಿ ಬಗ್ಗೆ ನಿರ್ಧಾರ ತಗೆದುಕೊಳ್ಳುವುದಿಲ್ಲ. 2024ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ನಲ್ಲಿ ನಡೆಯಲಿದೆ. ಇದರ ಒಳಗೆ ನನ್ನ ಫಿಟ್ನೆಸ್ ನೋಡಿಕೊಂಡು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆಂದು ಹೇಳಿದ್ದಾರೆ.
“ನಿವೃತ್ತಿ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇನ್ನೂ 8-9 ತಿಂಗಳು ಅವಕಾಶವಿದ. ಡಿಸೆಂಬರ್ ವೇಳೆ ಮಿನಿ ಹರಾಜು ನಡೆಯಲಿದೆ. ಹಾಗಾಗಿ ಈಗ ಏಕೆ ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು? ಇದರ ಬಗ್ಗೆ ನಿರ್ಧರಿಸಲು ಇನ್ನೂ ಹೆಚ್ಚಿನ ಸಮಯವಿದೆ. ಆದರೆ, ಆಟಗಾರನಾಗಿ ಅಥವಾ ಬೇರೆ ಜವಾಬ್ದಾರಿಯ ಮೂಲಕವಾದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೊತೆ ನಾನು ಯವಾಗಲೂ ಇದ್ದೇ ಇರುತ್ತೇನೆ,” ಎಂದು ಧೋನಿ ಸ್ಪಷ್ಟಪಡಿಸಿದ್ದಾರೆ.
2023ರ ಐಪಿಎಲ್ ಟೂರ್ನಿಗೆ ಸಿದ್ದತೆ ನಡೆಸಿದ್ದ ಬಗ್ಗೆ ಮಾತನಾಡಿದ ಎಂಎಸ್ ಧೋನಿ, “ಗಾಯದ ಬಗ್ಗೆ ನನಗೆ ಗೊತ್ತಿಲ್ಲ. ಇದು ನನಗೆ ಸಾಕಷ್ಟು ಕಾಟ ಕೊಟ್ಟಿದೆ. ಕಳೆದ ನಾಲ್ಕು ತಿಂಗಳುಗಳಿಂದ ನಾನು ಮನೆಯಿಂದ ಹೊರಗಡೆ ಇದ್ದೇನೆ. ಜನವರಿ 31ರಂದು ನಾನು ಅಭ್ಯಾಸ ಮಾಡಲು ಆರಂಭಿಸಿದ್ದೆ. ಲಯಕ್ಕೆ ಮರಳಲು ನಾನು ಸಾಕಷ್ಟು ಸಮಯ ತೆಗೆದುಕೊಂಡಿದ್ದೆ. ಆದರೆ, ನಿವೃತ್ತಿ ಬಗ್ಗೆ ಅಂತಿಮ ಕರೆ ತೆಗೆದುಕೊಳ್ಳಲು ಇನ್ನೂ ಸಾಕಷ್ಟು ಸಮಯವಿದೆ,” ಎಂದಿದ್ದಾರೆ.
2023ರ ಐಪಿಎಲ್ ಟೂರ್ನಿಯಲ್ಲಿ ಎಂಎಸ್ ಧೋನಿ 104 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು 10 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಈ ಆವೃತ್ತಿಯಲ್ಲಿ ಬ್ಯಾಕೆಂಡ್ನಲ್ಲಿ ಬರುತ್ತಿದ್ದ ಎಂಎಸ್ ಧೋನಿ, ಕೆಲ ಅದ್ಭುತ ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಅಭಿಮಾನಿಗಳನ್ನು ಭರ್ಜರಿಯಾಗಿ ರಂಜಿಸಿದ್ದಾರೆ.
ಫೈನಲ್ಗೆ ಲಗ್ಗೆ ಇಟ್ಟ ಚೆನ್ನೈ ಸೂಪರ್ ಕಿಂಗ್ಸ್
ಮಂಗಳವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಋತುರಾಜ್ ಗಾಯಕ್ವಾಡ್ (60 ರನ್) ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತ್ತು.