ಬೆಂಗಳೂರು: ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಫೀಲ್ಡಿಂಗ್ ವೈಫಲ್ಯವೇ ಕಾರಣ ಎಂದು ದೂರಿದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ, ಈ ಸೋಲಿಗೆ ನಾವು ಅರ್ಹರಾಗಿದ್ದೇವೆಂದು ಹೇಳಿಕೊಂಡಿದ್ದಾರೆ.
ಬುಧವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ವಾನಿಂದು ಹಸರಂಗ (24 ಕ್ಕೆ 2) ಹಾಗೂ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ (41 ಕ್ಕೆ 2) ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು. ಆದರೆ ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ ಸೇರಿದಂತೆ ಕೆಲವರು ಸುಲಭ ಕ್ಯಾಚ್ಗಳನ್ನು ಕೈಚೆಲ್ಲಿದ್ದು ಆರ್ಸಿಬಿಗೆ ಬಾರಿ ಹಿನ್ನಡೆಯನ್ನು ತಂದೊಡ್ಡಿತು. ಇದರ ಲಾಭ ಪಡೆದ ಕೆಕೆಆರ್ ಬರೋಬ್ಬರಿ 200 ರನ್ಗಳನ್ನು ಕಲೆ ಹಾಕಿತು.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ,”ಪ್ರಾಮಾಣಿಕವಾಗಿ ಹೇಳುವುದಾದರೆ ನಾವೇ ಪಂದ್ಯವನ್ನು ಎದುರಾಳಿ ತಂಡಕ್ಕೆ ಬಿಟ್ಟು ಕೊಟ್ಟಿದ್ದೇವೆ. ನಾವು ಸೋಲಲು ಅರ್ಹರಾಗಿದ್ದೇವೆ. ಪಂದ್ಯವನ್ನು ಒಮ್ಮೆ ಅವಲೋಕಿಸಿದರೆ ನಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಕೆಲ ನಿರ್ಣಾಯಕ ಕ್ಯಾಚ್ಗಳನ್ನು ಕೈಚೆಲ್ಲಿದ್ದರಿಂದ 25 ರಿಂದ 30 ಹೆಚ್ಚುವರಿ ರನ್ಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿದ್ದೇವೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ವಿಕೆಟ್ ಒಪ್ಪಿಸುವ ಎಸೆತಗಳಲ್ಲಿ ನಾವು ಔಟ್ ಆಗಿಲ್ಲ, ಬದಲಿಗೆ ಫೀಲ್ಡರ್ಗಳಿರುವ ಕಡೆಗೆ ನಾವೇ ಚೆಂಡನ್ನು ಹೊಡೆದು ಔಟ್ ಆಗಿದ್ದೇವೆ. ಇದು ಸ್ಕೋರ್ ಬೋರ್ಡ್ ಪರಿಣಾಮ. ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದ ಹೊರತಾಗಿಯೂ ನಮಗೆ ಒಂದೇ ಒಂದು ದೊಡ್ಡ ಜೊತೆಯಾಟದ ಅಗತ್ಯವಿತ್ತು. ಇದು ನಮ್ಮ ಪಾಲಿಗೆ ಸಕಾರವಾಗಲಿಲ್ಲ,” ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
“ನಾವು ಉತ್ತಮ ಪ್ರದರ್ಶನ ತೋರುವ ಮೂಲಕ ಪಂದ್ಯ ಗೆಲ್ಲುವುದರ ಕಡೆಗೆ ಗಮನ ಹರಿಸಬೇಕು. ಈ ಟೂರ್ನಿಯ ಹಾದಿಯಲ್ಲಿ ನಾವು ಒಂದು ಪಂದ್ಯ ಗೆದ್ದು, ಇನ್ನೊಂದು ಪಂದ್ಯದಲ್ಲಿ ಸೋಲು ಅನುಭವಿಸಿದ್ದೇವೆ. ಇದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಟೂರ್ನಿಯ ಕೊನೆಯ ಅಥವಾ ನಿರ್ಣಾಯಕ ಹಂತದಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆಲ್ಲಬೇಕಾಗಿದೆ,” ಎಂದು ಹಂಗಾಮಿ ನಾಯಕ ಹೇಳಿದ್ದಾರೆ
ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ್ದ ವಿರಾಟ್ ಕೊಹ್ಲಿ, 37 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 54 ರನ್ ಗಳಿಸಿ ತಂಡವನ್ನು ಗೆಲುವಿನ ಹಾದಿಯನ್ನು ಸುಗಮವಾಗಿಸಿದ್ದರು. ಆದರೆ, 13ನೇ ಓವರ್ ಮೊದಲನೇ ಎಸೆತದಲ್ಲಿ ಆಂಡ್ರೆ ರಸೆಲ್ಗೆ ದೊಡ್ಡ ಹೊಡತಕ್ಕೆ ಕೈ ಹಾಕಿ ಬೌಂಡರಿ ಲೈನ್ ಬಳಿ ವೆಂಕಟೇಶ್ ಅಯ್ಯರ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಕೊನೆಯ ಹಂತದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ದಿನೇಶ್ ಕಾರ್ತಿಕ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಅಂತಿಮವಾಗಿ ಆರ್ಸಿಬಿ 21 ರನ್ಗಳಿಂದ ಸೋಲು ಒಪ್ಪಿಕೊಂಡಿತು.