ಬೆಂಗಳೂರು: ಕರ್ನಾಟಕದಲ್ಲಿ ಅತ್ಯಂತ ಶ್ರೀಮಂತವಾದ ದೇವಸ್ಥಾನ ಯಾವುದು…? ಅದು ಎಲ್ಲಿದೆ.? .ಅದರ ವರಮಾನ ಎಷ್ಟಿರಬಹುದು..?ರಾಜಧಾನಿ ಬೆಂಗಳೂರಿನಲ್ಲಿಅತ್ಯಂತ ಹೆಚ್ಚು ಗಳಿಕೆಯ ದೇವಸ್ಥಾನ ಯಾವುದು..? ಹೀಗೊಂದಿಷ್ಟು ಪ್ರಶ್ನೆಗಳು ಯಾರನ್ನು ತಾನೇ ಕಾಡಿರೊಲ್ಲ ಹೇಳಿ.ಅಂತದ್ದೊಂದು ಪ್ರಶ್ನೆಗೆ ದಾಖಲೆ ಸಮೇತ ಉತ್ತರ ನೀಡ್ತಿದೆ.ಹೆಚ್ಚು ಆದಾಯವಿರುವ ದೇವಸ್ಥಾನಗಳ ಕುರಿತು ಮುಜರಾಯಿ ಇಲಾಖೆ ಮಾಡಿರುವ ಎಕ್ಸ್ ಕ್ಲ್ಯೂಸಿವ್ ಡೀಟೈಲ್ಸ್ ಇಲ್ಲಿದೆ.
ಧಾರ್ಮಿಕ ಶೃದ್ಧಾಕೇಂದ್ರಗಳಾದ ದೇವಸ್ಥಾನಗಳು ಭಕ್ತಿಯನ್ನು ಪಸರಿಸುವುದರ ಜತೆಗೆ ಆರ್ಥಿಕವಾಗಿಯೂ ಸರ್ಕಾರದ ಬೊಕ್ಕಸವನ್ನು ತುಂಬಿಸುತ್ತಾ ಬಂದಿವೆ.ಮುಜರಾಯಿ ವ್ಯಾಪ್ತಿಯಲ್ಲಿರುವ ಸಾಕಷ್ಟು ದೇವಸ್ಥಾನಗಳು ಆರ್ಥಿಕವಾಗಿ ಸಾಕಷ್ಟು ಸ್ಥಿತಿವಂತ ಸ್ಥಿತಿಯಲ್ಲಿವೆ, ಆದಾಯದ ದೃಷ್ಟಿಯಿಂದ ಅತ್ಯಂತ ಶ್ರೀಮಂತ ದೇವಸ್ಥಾನಗಳು ಎನ್ನುವಂಥ ಸ್ಥಾನ ಕಾಯ್ದುಕೊಂಡಿವೆ,
ಅಂದ್ಹಾಗೆ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಸಂಗ್ರಹವಾಗಿರುವ ಆದಾಯದ ಆಧಾರದಲ್ಲಿ ಅತ್ಯಂತ ಶ್ರೀಮಂತ ದೇಗುಲಗಳ ಪಟ್ಟಿಯನ್ನು ಸಿದ್ದಪಡಿಸಿದೆ.
2023-23ರ ಸಾಲಿನಲ್ಲಿ ಸಂಗ್ರಹವಾದ ಆದಾಯದ ಪೈಕಿ ಅತ್ಯಂತ ಶ್ರೀಮಂತವಾದ ದೇವಸ್ಥಾನ ಸುಳ್ಯ ತಾಲುಕಿನ ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಎನ್ನಲಾಗಿದೆ. ಅಂದ್ಹಾಗೆ ಸಂಗ್ರಹವಾಗಿರುವ ಆದಾಯ ಎಷ್ಟು ಗೊತ್ತಾ, ಬರೋಬ್ಬರಿ 123 ಕೋಟಿ 64 ಲಕ್ಷವಂತೆ. ಈ ಪೈಕಿ ಖರ್ಚು ರೂಪದಲ್ಲಿ 63 ಕೋಟಿ 77ಲಕ್ಷ ವೆಚ್ಚವಾಗಿದೆ. ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ನಂತರದ ಸ್ಥಾನದಲ್ಲಿರೋದು ಕುಂದಾಪುರದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ.ಅಂದ್ಹಾಗೆ ದೇವಸ್ಥಾನಕ್ಕೆ ಹರಿದುಬಂದ ಆದಾಯ 59 ಕೋಟಿ 47 ಲಕ್ಷವಾಗಿದ್ದರೆ ಖರ್ಚಾಗಿರುವುದು 33 ಕೋಟಿ 32 ಲಕ್ಷ.ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹರಿದುಬಂದ ಆದಾಯದ ಶೇಕಡಾ 50 ರಷ್ಟು ಇಲ್ಲಿ ಸಂಗ್ರಹವಾಗಿದೆ.
ಇನ್ನು ಟಾಪ್ 3ರ ಸ್ಥಾನದಲ್ಲಿರುವುದು ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯ ಮತ್ತು ಅರಮನೆ ಮುಜರಾಯಿ ದೇವಾಲಯಗಳು.ಭಕ್ತಾದಿಗಳಿಂದ 52 ಕೋಟಿ 40 ಲಕ್ಷ ಸಂಗ್ರಹವಾಗಿದ್ದರೆ ಖರ್ಚಾಗಿರುವುದು 52 ಕೋಟಿ 40 ಲಕ್ಷವಂತೆ. ಟಾಪ್ 4ರ ಸ್ಥಾನದಲ್ಲಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಎಡೆಯೂರಿನ ಶ್ರೀ ಸಿದ್ಧಲಿಂಗೇಶ್ವರ ದೇವಾಲಯವಿದೆ.ಅಂದ್ಹಾಗೆ ಸಂಗ್ರಹವಾಗಿದ್ದು 36 ಕೋಟಿ 48 ಲಕ್ಷವಾದ್ರೆ ಬರೋಬ್ಬರಿ 35 ಕೋಟಿ 68 ಲಕ್ಷದಷ್ಟು ಖರ್ಚಾಗಿದೆ.ಉಳಿದಿರೋದು ಕೇವಲ ಅರ್ಧ ಕೋಟಿ ಮಾತ್ರ. ಟಾಪ್ 5ರ ಸ್ಥಾನದಲ್ಲಿ ಮಂಗಳೂರು ತಾಲೂಕು ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.ಆದಾಯದ ರೂಪದಲ್ಲಿ ಸಂಗ್ರಹವಾಗಿದ್ದು 32 ಕೋಟಿ 10 ಲಕ್ಷವಾದ್ರೆ 25 ಕೋಟಿ 97 ಲಕ್ಷದಷ್ಟು ಖರ್ಚಾಗಿದೆ.
ಇನ್ನು ಟಾಪ್ 6 ರ ಸ್ಥಾನದಲ್ಲಿ ಮೈಸೂರಿನ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯವಿದೆ,ಆದಾಯದ ರೂಪದಲ್ಲಿ ಹರಿದುಬಂದಿದ್ದು 26 ಕೋಟಿ 71 ಲಕ್ಷವಾದ್ರೆ 18 ಕೋಟಿ 74 ಲಕ್ಷದಷ್ಟು ಖರ್ಚಾಗಿದೆ.ಹಾಗೆಯೇ ಟಾಪ್ 7 ರ ಸ್ಥಾನದಲ್ಲಿ ಬೆಳಗಾಂನ ಎಲ್ಲಮ್ಮನ ಗುಡ್ಡ ಸವದತ್ತಿ ತಾಲೂಕಿನ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನವಿದೆ. 22 ಕೋಟಿ 52 ಲಕ್ಷದಷ್ಟು ಆದಾಯ ಹರಿದುಬಂದಿದ್ರೆ ಖರ್ಚಾಗಿರುವುದು 11ಕೋಟಿ 51 ಲಕ್ಷವಂತೆ.
ಟಾಪ್ 8ರ ಸ್ಥಾನದಲ್ಲಿ ಉಡುಪಿ ಜಿಲ್ಲೆ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯವಿದ್ದು ವಾರ್ಷಿಕ 14 ಕೋಟಿ 55 ಲಕ್ಷ ಗಳಿಕೆಯಾಗಿದೆ.ಈ ಪೈಕಿ 13 ಕೋಟಿ 2 ಲಕ್ಷದಷ್ಟು ಖರ್ಚಾಗಿದೆ.ಇನ್ನು ಟಾಪ್ 9 ರ ಸ್ಥಾನದಲ್ಲಿ ದೊಡ್ಡಬಳ್ಳಾಪುರ ಜಿಲ್ಲೆ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವಿದೆ, ದೇವಸ್ಥಾನಕ್ಕೆ ಹರಿದುಬಂದಿದ್ದು 12 ಕೋಟಿ 25 ಲಕ್ಷವಾದ್ರೆ 7 ಕೋಟಿ 2 ಲಕ್ಷ ಖರ್ಚಾಗಿದೆ. ಮುಂದುವರೆದು ಟಾಪ್ 10ರ ಸ್ಥಾನದಲ್ಲಿ ಬೆಂಗಳೂರಿನ ಶ್ರೀ ಬನಶಂಕರಿ ದೇವಸ್ಥಾನವಿದೆ.ದೇವಸ್ಥಾನದಲ್ಲಿ ಸಂಗ್ರಹವಾಗಿದ್ದು 10 ಕೋಟಿ 58 ಲಕ್ಷವಾದ್ರೆ 19 ಕೋಟಿ 41 ಲಕ್ಷದಷ್ಟು ಖರ್ಚಾಗಿದೆ.ಆದಾಯಕ್ಕಿಂತ ಖರ್ಚಾಗಿರುವುದೇ ಹೆಚ್ಚು.
ಅಂದ್ಹಾಗೆ ಈ 10 ದೇವಸ್ಥಾನಗಳಿಂದಲೇ 390 ಕೋಟಿ 75 ಲಕ್ಷದಷ್ಟು ಆದಾಯ ಹರಿದುಬಂದಿರುವುದು ವಿಶೇಷ.2023-24 ರಲ್ಲಿ ಆದಾಯದ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆಗಳಿವೆ.ಇಷ್ಟೊಂದು ಆದಾಯದಲ್ಲಿ ಖರ್ಚಾಗಿದ್ದು 281 ಕೋಟಿ 27 ಲಕ್ಷ ಎನ್ನುವುದು ಮುಜರಾಯಿ ಇಲಾಖೆ ವಿವರಣೆ. ಇದೆಲ್ಲವೂ ಅಲ್ಲಿನ ದೇವಸ್ಥಾನಗಳು ಆಂತರಿಕವಾಗಿ ಮಾಡಿಕೊಂಡ ಲೆಕ್ಕಪರಿಶೋಧನೆಯಿಂದ ಹೊರಬಂದ ಮಾಹಿತಿಗಳು.ಆದರೆ ಸರ್ಕಾರಿ ಸ್ವಾಮ್ಯದ ಆಡಿಟರ್ ಜನರಲ್ ಕಚೇರಿಯಿಂದ ಆಡಿಟ್ ಮಾಡಿಸಿದಿದ್ದರೆ ಸತ್ಯ ಬಯಲಾಗ್ತಿತ್ತು.ಹಾಗಾಗಿ ದೇವಸ್ಥಾನದ ಆಡಳಿತ ಮಂಡಳಿಯಲ್ಲಿರೋರು ಕೊಟ್ಟಿರುವ ಮಾಹಿತಿಯೂ ಲೋಪದಿಂದ ಕೂಡಿರಬಹುದೆನ್ನುವ ಮಾತು ಕೇಳಿಬರುತ್ತಿದೆ.