ದೆಹಲಿ: 5 ಬಾರಿ ಟ್ರೋಫಿ ಜಯಿಸಿರುವ ಆಸ್ಟ್ರೇಲಿಯಾ ಹಾಗೂ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಗಳ ಪೈಕಿ 2 ತಂಡಗಳು ಪ್ರಬಲ ಪೈಪೋಟಿ ನಡೆಸಲಿವೆ ಎಂದು 1983ರ ವಿಶ್ವಕಪ್ ವಿಜೇತ ಆಟಗಾರ ಕೃಷ್ಣಾಮಚಾರಿ ಶ್ರೀಕಾಂತ್ ಭವಿಷ್ಯ ನುಡಿದಿದ್ದಾರೆ.
2019ರ ಆಂಗ್ಲರ ನಾಡಿನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪಂದ್ಯವು ಹಿಂದಿನ ಆವೃತ್ತಿಗಳಿಗಿಂತ ಹೆಚ್ಚು ರೋಚಕತೆ ಮೂಡಿಸಿದ್ದು, ಪಂದ್ಯ ಸೂಪರ್ ಓವರ್ ನಲ್ಲೂ ಟೈ ಆದ ಪರಿಣಾಮ ಬೌಂಡರಿ ಹಾಗೂ ಸಿಕ್ಸರ್ ಗಳ ಆಧಾರದ ಮೇಲೆ ಐಯಾನ್ ಮಾರ್ಗನ್ ಸಾರಥ್ಯದ ಇಂಗ್ಲೆಂಡ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ ಕೇನ್ ವಿಲಿಯಮ್ಸನ್ ಸಾರಥ್ಯದ ನ್ಯೂಜಿಲ್ಯಾಂಡ್ ರನ್ನರ್ಸ್ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತ್ತು.
ಅಕ್ಟೋಬರ್- ನವೆಂಬರ್ ಅವಧಿಯಲ್ಲಿ ಆಯೋಜನೆಗೊಂಡಿರುವ ಹನ್ನೆರಡನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನೂ 99 ದಿನಗಳು ಬಾಕಿ ಉಳಿದಿದ್ದು, 1983ರ ವಿಶ್ವಕಪ್ ಚಾಂಪಿಯನ್ ಟೀಮ್ ಇಂಡಿಯಾದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ಫೈನಲ್ ಸುತ್ತು ಪ್ರವೇಶಿಸುವ ತಂಡಗಳನ್ನು ಹೆಸರಿಸಿದ್ದಾರೆ.
ಇಂಡಿಯಾ ಟುಡೇ ಜತೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್, ತವರಿನಂಗಳದಲ್ಲಿ ಏಕದಿನ ವಿಶ್ವಕಪ್ ಮಹಾಟೂರ್ನಿ ಆಯೋಜನೆ ಆಗಿದ್ದು ಸಹಜವಾಗಿಯೇ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಫೈನಲ್ ಸುತ್ತು ತಲುಪಬಹುದು. ಇದರೊಂದಿಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಕೂಡ ಟ್ರೋಫಿ ಸುತ್ತು ಪ್ರವೇಶಿಸುವ ಅವಕಾಶ ಹೊಂದಿದೆ ಎಂದು ಹೇಳಿದ್ದಾರೆ.
“ಟೀಮ್ ಇಂಡಿಯಾ ಫೈನಲ್ ಸುತ್ತು ತಲುಪುವ ನೆಚ್ಚಿನ ತಂಡವಾಗಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ ಉತ್ತಮ ಆಟಗಾರರನ್ನು ಹೊಂದಿ ಬಲಿಷ್ಠ ತಂಡವಾಗಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಕೂಡ ಫೈನಲ್ ಹಂತ ಪ್ರವೇಶಿಸಬಹುದು.ಆಸ್ಟ್ರೇಲಿಯಾ ತಂಡವು ಭಾರತದ ಪಿಚ್ ಗಳಲ್ಲಿ ಅತ್ಯಮೋಘ ಪ್ರದರ್ಶನ ನೀಡುತ್ತದೆ ಎಂದು ನಾನು ನಂಬುತ್ತೇನೆ. ಆದ್ದರಿಂದ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ಪೈಕಿ ಒಂದು ತಂಡ ಟ್ರೋಫಿ ಗೆಲ್ಲಬಹುದು” ಎಂದು ಶ್ರೀಕಾಂತ್ ಭವಿಷ್ಯ ನುಡಿದಿದ್ದಾರೆ.