ಕೊಚ್ಚಿ:- ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಅವರು ಜವಾಹರ್ಲಾಲ್ ನೆಹರು ಸ್ಟೇಡಿಯಂನಿಂದ ಕೆಳಗೆ ಬಿದ್ದ ಪರಿಣಾಮ ಗಂಭೀರ ಗಾಯವಾಗಿರುವ ಘಟನೆ ಜರುಗಿದೆ.
ಕೊಚ್ಚಿಯಲ್ಲಿ ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಉಮಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು, ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಈ ಘಟನೆ ನಡೆದಿದೆ.
ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ವೇದಿಕೆಯಿಂದ 15 ಅಡಿ ಕೆಳಗೆ ಬಿದ್ದಿದ್ದಾರೆ. ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನಡೆಯುತ್ತಿತ್ತು. ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಅವರನ್ನು ಸ್ವಾಗತಿಸಿದ ನಂತರ, ಶಾಸಕಿ ಥಾಮಸ್ ವಿಐಪಿ ಪೆವಿಲಿಯನ್ನಲ್ಲಿ ತಮ್ಮ ಆಸನದ ಕಡೆಗೆ ಹೋಗುತ್ತಿದ್ದರು. ಈ ವೇಳೆ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಸ್ಥಳದಲ್ಲಿದ್ದ ವೈದ್ಯಕೀಯ ತಂಡ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ ಅವರ ಸ್ಥಿತಿ ಚಿಂತಾಜನಕವಾಗಿದೆ. ಉಮಾ ತಲೆಗೆ ಗಾಯವಾಗಿದ್ದು, ಹಲವು ಕಡೆ ಮೂಳೆ ಮುರಿತಗಳಾಗಿವೆ. ಮುಂದಿನ 24 ಗಂಟೆಗಳ ಕಾಲ ಅವರನ್ನು ನಿಗಾ ಇಡಬೇಕಾಗಿದೆ.