ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಭವ ತಂಡಕ್ಕೆ ನಿಜಕ್ಕೂ ಅಗತ್ಯವಿದೆ ಎಂದು ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕೊಹ್ಲಿ ಮೂರು ಲೀಗ್ ಪಂದ್ಯಗಳಲ್ಲಿ ಎರಡಂಕಿಯನ್ನೂ ತಲುಪಿಲ್ಲ.
ನಾಯಕ ರೋಹಿತ್ ಶರ್ಮಾ ಐರ್ಲೆಂಡ್ ವಿರುದ್ಧ ಅರ್ಧಶತಕ ಬಾರಿಸಿದ್ದು, ಬಿಟ್ಟರೆ ಪಾಕಿಸ್ತಾನ ಮತ್ತು ಅಮೆರಿಕ ವಿರುದ್ಧ ರನ್ ಗಳಿಸಲಿಲ್ಲ. ಆದರೆ, ಅವರಿಬ್ಬರ ಅನುಭವ ತಂಡಕ್ಕೆ ನಿಜಕ್ಕೂ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಲೀಗ್ನಲ್ಲಿ ಆಡದಿದ್ದರೂ, ನಾಕೌಟ್, ಸೆಮಿಫೈನಲ್, ಫೈನಲ್ ಪಂದ್ಯದಲ್ಲಿ ಮಿಂಚಿದರೆ, ಹಿರಿತನಕ್ಕೆ ತಕ್ಕುದಾದ ಬೆಲೆ ಸಿಗಲಿದೆ. ಅಭಿಮಾನಿಗಳ ನಿರೀಕ್ಷೆಯೂ ಇದೇ ಆಗಿರುತ್ತದೆ. 1992 ರಲ್ಲಿ ಪಾಕಿಸ್ತಾನ ಕೂಡ ಇಂಥದ್ದೇ ಲೆಕ್ಕಾಚಾರದಲ್ಲಿ ಗೆಲುವು ಸಾಧಿಸಿತ್ತು. ಕಠಿಣ ಪಂದ್ಯಗಳಲ್ಲಿ ಹಿರಿಯರ ಅನುಭವ ಕೆಲಸ ಮಾಡುತ್ತದೆ. ಹೀಗಾಗಿ ಆಯ್ಕೆ ಸಮಿತಿ ಈ ನಿರ್ಧಾರಕ್ಕೆ ಬಂದಿರುತ್ತದೆ ಎಂದು ಮಾಂಜ್ರೇಕರ್ ಹೇಳಿದರು.
ಭವಿಷ್ಯದಲ್ಲಿ ವಿರಾಟ್ ಮತ್ತು ರೋಹಿತ್ ಟಿ20 ಟೂರ್ನಿಗಳಲ್ಲಿ ಆಡಲಿದ್ದಾರೆಯೇ ಎಂಬ ಪ್ರಶ್ನೆಗೆ, ಇದನ್ನು ಆಯ್ಕೆ ಸಮಿತಿ ನಿರ್ಧರಿಸುತ್ತದೆ. ಈ ಇಬ್ಬರ ಬಗ್ಗೆ ಆಯ್ಕೆ ಸಮಿತಿಯ ನಿಲುವೇನು ಎಂದು ಅವರನ್ನೇ ಕೇಳಬೇಕು. ಇಬ್ಬರ ಮೇಲೆ ಇನ್ನೂ ನಂಬಿಕೆ ಇರುವ ಕಾರಣ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.