ಕೊಲಂಬೊ: ಚೇಸ್ ಮಾಸ್ಟರ್, ಸೂಪರ್ ಸ್ಟಾರ್ ಕ್ರಿಕೆಟಿಗ, ಕ್ರಿಕೆಟ್ ಲೋಕದ ಕಿಂಗ್ ಎಂದೇ ವಿಶ್ವದಾದ್ಯಂತ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ (Virat Kohli) ಆಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ (International Cricket) ಮೈಲುಗಲ್ಲು ಸ್ಥಾಪಿಸಿದ್ದಾರೆ.
2018ರ ಆಗಸ್ಟ್ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಂಟ್ರಿ ಕೊಟ್ಟ ಕೊಹ್ಲಿ ಇದೀಗ ವಿಶ್ವದಲ್ಲೇ ಅತಿಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟರ್ಸ್ಗಳ ಪಟ್ಟಿ ಸೇರಿ ಇತಿಹಾಸ ನಿರ್ಮಿಸಿದ್ದಾರೆ.
ಏಕದಿನ ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ನಲ್ಲಿ ಪಾಕಿಸ್ತಾನ ವಿರುದ್ಧ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 129.78 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ 122 ರನ್ (9 ಬೌಂಡರಿ, 3 ಸಿಕ್ಸರ್) ಚಚ್ಚಿದ್ದಾರೆ. ಜೊತೆಗೆ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ 13 ಸಾವಿರ ರನ್ ಪೂರೈಸಿದ್ದಾರೆ. 278ನೇ ಮ್ಯಾಚ್ ಹಾಗೂ 267ನೇ ಇನ್ನಿಂಗ್ಸ್ನಲ್ಲಿ ಕೊಹ್ಲಿ ಸಾಧನೆ ಮಾಡಿದ್ದು, ಅತ್ಯಂತ ಕಡಿಮೆ ಇನ್ನಿಂಗ್ಸ್ಗಳಲ್ಲಿ 13 ಸಾವಿರ ರನ್ ಕಲೆಹಾಕಿದ ವಿಶ್ವದ ವೇಗದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ (Sachin Tendulkar) 321ನೇ ಇನ್ನಿಂಗ್ಸ್ನಲ್ಲಿ 13 ಸಾವಿರ ರನ್ ಪೂರೈಸಿದ್ದರು. ಆದ್ರೆ ಕೊಹ್ಲಿ ಸಚಿನ್ಗಿಂತಲೂ 54 ಕಡಿಮೆ ಇನ್ನಿಂಗ್ಸ್ನಲ್ಲೇ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 29 ಶತಕ ಗಳಿಸಿರುವ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 47ನೇ ಶತಕ ಸಿಡಿಸಿದ್ದು, ಅತಿ ಶೀಘ್ರದಲ್ಲೇ ಸಚಿನ್ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ.
ಏಷ್ಯಾಕಪ್ ಸೂಪರ್ ಫೋರ್ ಪಂದ್ಯದಲ್ಲಿ ಶತಕ ಸಿಡಿಸಿ ಮೆರೆದಾಡಿದ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ ಗಳಿಸಿದ ವಿಶ್ವದ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. 18,426 ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದರೆ, 14,234 ರನ್ ಗಳಿಸಿರುವ ಕುಮಾರ್ ಸಂಗಕ್ಕಾರ 2ನೇ ಸ್ಥಾನದಲ್ಲಿದ್ದಾರೆ. 13,704 ರನ್ ಗಳಿಸಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಟಿಂಗ್ 3ನೇ ಸ್ಥಾನದಲ್ಲಿ ಹಾಗೂ ಶ್ರೀಲಂಕಾದ ಸನತ್ ಜಯಸೂರ್ಯ 13,430 ರನ್ ಗಳಿಸಿ 4ನೇ ಸ್ಥಾನದಲ್ಲಿದ್ದರೆ 13,024 ರನ್ಗಳಿಸಿರುವ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ.