ಹೊಸದಿಲ್ಲಿ: ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಏರಿಳಿತಗಳನ್ನು ಅನುಭವಿಸಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇದೀಗ ಎಲ್ಲಾ ಸ್ವರೂಪದಲ್ಲಿ ಫಾರ್ಮ್ ಮರಳಿದ್ದು, ಎದುರಾಳಿ ತಂಡಗಳಿಗೆ ಭೀತಿ ಉಂಟಾಗಿದೆ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಪಾಲ್ ಕಾಲಿಂಗ್ವುಡ್ ಎಚ್ಚರಿಕೆ ನೀಡಿದ್ದಾರೆ.
2019ರ ಡಿಸೆಂಬರ್ ತಿಂಗಳಲ್ಲಿ ಬಾಂಗ್ಲಾದೇಶ ವಿರುದ್ಧ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೊನೆಯ ಶತಕ ಸಿಡಿಸಿದ್ದರು. ಇದಾದ ಬಳಿಕ ಅವರು ಸತತ ಮೂರು ವರ್ಷಗಳ ಕಾಲ ಮೂರಂಕಿ ವೈಯಕ್ತಿಕ ಮೊತ್ತ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು ಹಾಗೂ ಮೂರೂ ಸ್ವರೂಪದ ನಾಯಕತ್ವವನ್ನು ಬಿಟ್ಟುಕೊಟ್ಟಿದ್ದರು.
ಆದರೆ, ಕಳೆದ ವರ್ಷ ಏಷ್ಯಾ ಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ, ಬಳಿಕ ಏಕದಿನ ಕ್ರಿಕೆಟ್ನಲ್ಲಿಯೂ ಹಲವು ಶತಕಗಳನ್ನು ಸಿಡಿಸಿದ್ದರು. ಆದರೆ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗಳಲ್ಲಿ ಶತಕ ಸಿಡಿಸುವಲ್ಲಿ ವಿಫಲರಾಗಿದ್ದ ಅವರು, ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಅಂತ್ಯವಾಗಿದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 186 ರನ್ ಸಿಡಿಸಿದ್ದರು. ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿಯೂ ಅವರು ಮೂರು ವರ್ಷಗಳ ಶತಕ ಸಿಡಿಸಿದ್ದರು.
ಎನ್ಡಿ ಟಿವಿ ಜೊತೆ ಇತ್ತೀಚೆಗೆ ಮಾತನಾಡಿದ್ದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಪಾಲ್ ಕಾಲಿಂಗ್ವುಡ್, ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಕೊಂಡಾಡಿದರು. ಇದೀಗ ಅವರು ಎಲ್ಲಾ ಸ್ವರೂಪದಲ್ಲಿ ಫಾರ್ಮ್ಗೆ ಮರಳಿರುವ ಕಾರಣ ಎಲ್ಲಾ ಎದುರಾಳಿ ತಂಡಗಳಿಗೆ ಭೀತಿ ಶುರುವಾಗಿದೆ ಎಂದು ಹೇಳಿದ್ದಾರೆ.
“ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಿಗೂ ಭೀತಿ ಉಂಟಾಗಿದೆ. ಯಾವುದೇ ತಂಡದ ವಿರುದ್ದ, ಯಾವುದೇ ಸನ್ನಿವೇಶದಲ್ಲಿ ರನ್ ಗಳಿಸುವ ಸಾಮರ್ಥ್ಯ ಹಾಗೂ ಕೌಶಲವನ್ನು ಅವರು ಹೊಂದಿದ್ದಾರೆ,” ಎಂದು ಪಾಲ್ ಕಾಲಿಂಗ್ವುಡ್ ಹೇಳಿರುವುದನ್ನು ಎನ್ಡಿ ಟಿವಿ ಪ್ರಕಟಿಸಿದೆ.
ಕಳೆದ 2022ರ ಏಷ್ಯಾ ಕಪ್ ಟೂರ್ನಿಯಲ್ಲಿ ಲಯ ಕಂಡುಕೊಂಡಿದ್ದ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ್ದರು. ಇದಾದ ಬಳಿಕ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದಿದ್ದ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು.