ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಗೆ (Assembly Election) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕೋಲಾರ (Kolara) ಹಾಗೂ ವರುಣಾ (Varuna) ಕ್ಷೇತ್ರಗಳ ಪೈಕಿ ಎಲ್ಲಿ ಸ್ಪರ್ಧೆಗೆ ನಿಲ್ಲುತ್ತಾರೆ ಎಂಬುದು ಭಾರೀ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಆದರೆ ಇದರ ಬೆನ್ನಲ್ಲೆ ಸಿದ್ದರಾಮಯ್ಯ ಈ ಎರಡೂ ಕ್ಷೇತ್ರಗಳನ್ನು ಪಕ್ಕಕ್ಕಿಟ್ಟು ಈಗ ಬಾದಾಮಿಯಲ್ಲಿ (Badami) ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಕೋಲಾರ ಹಾಗೂ ವರುಣಾ ಕ್ಷೇತ್ರಗಳಲ್ಲಿ ಗೊಂದಲವಿರುವ ನಡುವೆಯೇ ಸಿದ್ದರಾಮಯ್ಯ ಇದೀಗ ಬಾದಾಮಿ ಪ್ರವಾಸಕ್ಕೆ ಮುಂದಾಗುತ್ತಿದ್ದಾರೆ. ಶುಕ್ರವಾರ ಬಾದಾಮಿಗೆ ತೆರಳಲಿರುವ ಸಿದ್ದರಾಮಯ್ಯ ಅಲ್ಲಿ 500 ಕೋಟಿ ರೂ. ವೆಚ್ಚದ ಬಾದಾಮಿ-ಕೆರೂರು ಶಾಶ್ವತ ಕುಡಿಯವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಿದ್ದಾರೆ.
ಸ್ವಕ್ಷೇತ್ರದಲ್ಲಿ ನಡೆಯಲಿರಯವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಬಾಗಿಯಾಗುವುದರಲ್ಲಿ ಯಾವುದೇ ವಿಶೇಷ ಇಲ್ಲ. ಆದರೆ ಈ ಕಾರ್ಯಕ್ರಮದ ಬಳಿಕ ರೋಡ್ ಶೋ (Road Show) ನಡೆಸಲಿದ್ದಾರೆ. ಈ ರೋಡ್ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಭರ್ಜರಿ ರೋಡ್ ಶೋಗೆ ಸಿದ್ಧತೆಗಳನ್ನು ಮಾಡಲಾಗಿದ್ದು, ಸಿದ್ದರಾಮಯ್ಯ ಅವರ ಈ ನಡೆ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸುತ್ತಿದೆ.
ಬಾದಾಮಿ ನಗರದ ರಾಮದುರ್ಗ ಕ್ರಾಸ್ನಿಂದ ಎಪಿಎಂಸಿ ಆವರಣದ ವರೆಗೆ ರೋಡ್ ಶೋ ನಡೆಸಲಿದ್ದಾರೆ. ಸಿದ್ದರಾಮಯ್ಯನವರ ಈ ನಡೆಯಿಂದ ಪರೋಕ್ಷವಾಗಿ ಬಾದಾಮಿ ಮತದಾರರ ಮನಸ್ಥಿತಿ ಅಳೆಯಲು ಅವರು ಮುಂದಾಗಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ.
ಈ ಬಾರಿ ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದ ಸಿದ್ದರಾಮಯ್ಯ ಬಳಿಕ ಯು ಟರ್ನ್ ಹೊಡೆದು ವರುಣಾದಲ್ಲಿ ಕಣಕ್ಕಿಳಿಯಲು ಚಿಂತಿಸಿದ್ದರು. ಆದರೆ ಮತ್ತೆ ಸಿಎಂ ಆಗಬೇಕೆಂದು ಕನಸು ಕಾಣುತ್ತಿರುವ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಇದರ ನಡುವೆಯೇ ಹಲವು ಕ್ಷೇತ್ರಗಳಿಂದ ಅವರಿಗೆ ಆಹ್ವಾನಗಳೂ ಬರತೊಡಗಿವೆ.
ಈ ಬಾರಿ ನಾನು ಬಾದಾಮಿಯಿಂದ ಸ್ಪರ್ಧೆ ಮಾಡುವುದಿಲ್ಲ. ಬೆಂಗಳೂರಿನಿಂದ ಬಾದಾಮಿ ಬಹಳ ದೂರದಲ್ಲಿದೆ. ಬೆಂಗಳೂರು ಹತ್ತಿರದಲ್ಲಿರುವ ಕ್ಷೇತ್ರದಲ್ಲಿ ಈ ಬಾರಿ ನಿಲ್ಲುತ್ತೇನೆ. ಹೀಗಾಗಿ ವರುಣಾ ಇಲ್ಲವೇ ಕೋಲಾರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದರು.