ಶಿಡ್ಲಘಟ್ಟ: ಕ್ಷೇತ್ರದಲ್ಲಿ ಕಾಂಗ್ರೆಸ್ ಲೆಕ್ಕಕುಂಟು ಆಟಕ್ಕಿಲ್ಲ, ಇಲ್ಲಿ ಏನಿದ್ದರೂ ಬಿಜೆಪಿ ಮತ್ತು ಜೆಡಿಎಸ್ ನದ್ದು ಪೈಪೋಟಿ, ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದು ಸಚಿವ ಡಾ. ಸುಧಾಕರ್ ನುಡಿದರು.
ನಗರದ ಕೋಟೇ ವೃತ್ತದ ಬಳಿ ಬಿಜೆಪಿ ರಥ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಜೆಡಿಎಸ್ ನಿಂದ ಗೆದ್ದಾಗ ರಾಜಣ್ಣ ಗಡ್ಡ ಬಿಟ್ಟುಕೊಂಡು ಅನುಕಂಪದ ಮೇಲೆ ಗೆದ್ದಿದ್ದರು, ಸದ್ಯದ ಜೆಡಿಎಸ್ ಅಭ್ಯರ್ಥಿ ಅದೇ ಸೂತ್ರವನ್ನು ಅನುಸರಿಸುತ್ತಿದ್ದಾರೆ, ಆದರೆ ಈ ಬಾರಿ ಅನುಕಂಪದ ಸೂತ್ರ ಕೆಲಸ ಮಾಡುವುದಿಲ್ಲ, ಕ್ಷೇತ್ರದಲ್ಲಿ ಬಿಜೆಪಿ ಅಲೆ ಬೀಸುತ್ತಿದ್ದು, ನಮ್ಮ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದರು.
ನಂತರ ಮಾತನಾಡಿದ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ರಾಮಚಂದ್ರ ಗೌಡ ನಾನು ರಾಜಕಾರಣಿಯಲ್ಲ, ಮೋದಿಜಿಯವರ ಅಭಿವೃದ್ದಿಗೆ ಮನಸೋತ ಅಭಿಮಾನಿಗಳಲ್ಲೊಬ್ಬ, ಅವರಂತೆ ಅಭಿವೃದ್ದಿ ಕನಸು ಕಂಡವನು. ನಾನಷ್ಟೇ ಅಲ್ಲ ಇಂದು ದೇಶದ ಯುವಕರೆಲ್ಲರೂ ಮೋದಿಯನ್ನು ಬೆಂಬಲಿಸುತ್ತಿದ್ದು, ನಾವೆಲ್ಲಾ ಮನಸ್ಸು ಮಾಡಿದ್ದೇ ಆದರೆ ಕರ್ನಾಟಕದಲ್ಲೂ ಮತ್ತೊಬ್ಬ ಮೋದಿಯನ್ನು ಹುಟ್ಟು ಹಾಕಬಹುದು, ಅದು ಸಾದ್ಯವಾಗಬೇಕಾದರೆ ಬಿಜೆಪಿಯನ್ನು ಬೆಂಬಲಿಸಬೇಕು ಎಂದರು. ಕ್ಷೇತ್ರದಲ್ಲಿ ಅನೇಕ ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಜನತೆ ಕಂಡಿದ್ದಾರೆ, ರಾಜಣ್ಣನವರ ಅವದಿಯಲ್ಲಿ ಸಾದ್ಯವಾಗಿರುವ ಅಭಿವೃದ್ಧಿಯನ್ನು ಜನರು ಮೆಚ್ಚಿದ್ದಾರೆ. ಜನರು ಅಭಿವೃದ್ಧಿ ಬಯಸಿದ್ದು ಬಿಜೆಪಿಯ ಜೊತೆಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಂಸದ ಎಸ್ ಮುನಿಸ್ವಾಮಿ, ಎಂ ರಾಜಣ್ಣ, ದೇವನಹಳ್ಳಿ ಪಿಳ್ಳ ಮುನಿಶಾಮಪ್ಪ, ನಗರ ಪ್ರಾಧಿಕಾರದ ಅಧ್ಯಕ್ಷ ಬಿಸಿ ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್, ಆನಂದ ಗೌಡ, ಯುವಮೊರ್ಚಾ ಅಧ್ಯಕ್ಷ ಜೆ.ಎಸ್ ಭರತ್ ಕುಮಾರ್, ನರ್ಮಾದಾರೆಡ್ಡಿ, ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.