ಕೋಲಾರ: ಕಳೆದ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ 7 ದಿನದಲ್ಲಿ ಕ್ಷೇತ್ರದ ಬಗ್ಗೆ ಅರಿವೇ ಇಲ್ಲದ ಅಭ್ಯರ್ಥಿಯನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದ ಕೊತ್ತೂರು ಮಂಜುನಾಥ್ ಇದೀಗ ಕೋಲಾರದಲ್ಲಿ ಅಂತಹುದೇ ಸಾಹಸಕ್ಕೆ ಕೈ ಹಾಕುವ ಮೂಲಕ ತಮ್ಮ ಪ್ರಾಭಲ್ಯವನ್ನು ಮೆರೆಯಲು ಮುಂದಾಗಿದ್ದಾರೆ. ಹೌದು ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಡೆ ದಿನ ನಾಮಪತ್ರ ಸಲ್ಲಿಸಿ ಕೊತ್ತೂರು ಮಂಜುನಾಥ್ ಕಳೆದ 10 ದಿನದಿಂದ ಮಿಂಚಿನ ಸಂಚಾರ ಮಾಡಿ ಮತದಾರರನ್ನು ಗೆಲ್ಲಲ್ಲು ಮುಂದಾಗಿದ್ದಾರೆ.
ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ಕೊತ್ತೂರು ಮಂಜುನಾಥ್ ಅವರಿಗೆ ಅಭುತಪೂರ್ವ ಬೆಂಬಲ ದೊರೆಯುತ್ತಿದ್ದು ಮುಳಬಾಗಿಲು ಕ್ಷೇತ್ರದಲ್ಲಿ ಶಾಸಕರಾಗಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡಿರುವ ಕೋಲಾರ ಕ್ಷೇತ್ರದ ಜನತೆ ಕೊತ್ತೂರು ಮಂಜುನಾಥ್ ಗೆ ಭಾರಿ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಕೋಲಾರದಲ್ಲಿ ಕಾಂಗ್ರೆಸ್ ಅಧಿಕಾರ ಸಿಗದೆ ಪರಿತಪಿಸುತ್ತಿದ್ದು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕೋಲಾರದಲ್ಲಿ ನಿಲ್ಲಿಸಿ ಗೆಲ್ಲಿಸುವ ಮೂಲಕ ಕೋಲಾರ ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ಆಸೆಯನ್ನು ಹೊಂದಿದ್ದ ಕೊತ್ತೂರು ಮಂಜುನಾಥ್ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಕ್ಷೇತ್ರದ ಸ್ಪರ್ದೆಯಿಂದ ಹಿಂದೆ ಸರಿದ ಕಾರಣ ಕೊತ್ತೂರು ಮಂಜುನಾಥ್ ಗೆ ಬಿ ಫಾರಂ ನೀಡಿದ್ದರು.
ಅದರಂತೆ ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರದಲ್ಲಿರುವ ಮಂಜುನಾಥ್ ಗೆ ಗ್ರಾಮೀಣ ಭಾಗ ಹಾಗೂ ನಗರ ಪ್ರದೇಶದಲ್ಲಿ ಭಾರಿ ಬೆಂಬಲ ವ್ಯಕ್ತವಾಗುವ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ನಡುಕ ಶುರುವಾಗಿದೆ. ಇನ್ನು ಪ್ರಚಾರದ ವೇಳೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್, ಕಳೆದ 11 ದಿನಗಳಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರಚಾರ ಕೈಗೊಂಡಿದ್ದು ಅಭೂತಪೂರ್ವ ಬೆಂಬಲ ದೊರಕುತ್ತಿದೆ. ಕೋಲಾರ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕೋಲಾರದಲ್ಲಿ ನಾನೇ ಶಾಸಕನಾಗಿ ಗೆದ್ದು ಬರುತ್ತೇನೆ.
ಹಾಗೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಆಗ ಕೋಲಾರ ನಗರಕ್ಕೆ ಅಭಿವೃದ್ಧಿಗಾಗಿ ಸಾವಿರ ಕೋಟಿ ಅವಶ್ಯಕತೆ ಇದ್ದು, ಅಷ್ಟೂ ಹಣವನ್ನು ನಮ್ಮ ಕಾಂಗ್ರೆಸ್ ಸರ್ಕಾರದಿಂದ ತಂದು ಅಭಿವೃದ್ಧಿ ಮಾಡುತ್ತೇನೆ. ಕಳೆದ 2018ರ ಮುಳಬಾಗಿಲು ಕ್ಷೇತ್ರದಲ್ಲಿ ಕಳೆದ 7 ದಿನದಲ್ಲಿ ಕೊತ್ತೂರು ಮಂಜುನಾಥ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಹೆಚ್. ನಾಗೇಶ್ ಅವರನ್ನು ಗೆಲ್ಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದೆ. ಅಂತಹುದೇ ಇತಿಹಾಸ ಕೋಲಾರ ಕ್ಷೇತ್ರದಲ್ಲಿ ನನ್ನ ಗೆಲುವಿನ ಮೂಲಕ ಮತ್ತೆ ಇತಿಹಾಸ ಸೃಷ್ಟಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.