‘ಅನಿಮಲ್’, ‘ಭೂಲ್ ಭುಲಯ್ಯ 2’ ಸೇರಿದಂತೆ ಇನ್ನೂ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಕೃಷ್ಣ ಕುಮಾರ್ಗೆ ಶಾಕ್ ಎದುರಾಗಿದೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೃಷ್ಣ ಕುಮಾರ್ ಅವರ ಮಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಿಶಾ ಕುಮಾರ್ ಅವರು ಕೇವಲ 20ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ಅವರನ್ನು ಉಳಿಸಿಕೊಳ್ಳೋಕೆ ಕುಟುಂಬದ ಬಳಿ ಸಾಧ್ಯವಾಗಿಲ್ಲ. ಜುಲೈ 18ರಂದು ತಿಶಾ ನಿಧನ ಹೊಂದಿದ್ದು, ಇಂದು (ಜುಲೈ 19) ಕುಟುಂಬದವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೃಷ್ಣ ಕುಮಾರ್ ಅವರು ಬಾಲಿವುಡ್ನ ಖ್ಯಾತ ನಿರ್ಮಾಣ ಸಂಸ್ಥೆ ಟಿ-ಸೀರಿಸ್ನ ಭಾಗವಾಗಿದ್ದಾರೆ. ಟಿ-ಸೀರಿಸ್ ನಿರ್ಮಾಣದ ಸಿನಿಮಾಗಳಲ್ಲಿ ಇವರ ಪಾಲೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಟಿ-ಸೀರಿಸ್ ಕಡೆಯಿಂದ ಸುತ್ತೋಲೆ ರಿಲೀಸ್ ಮಾಡಲಾಗಿದೆ. ‘ಕೃಷ್ಣ ಕುಮಾರ್ ಅವರ ಮಗಳು ತಿಶಾ ಅವರು ತೀರಿಕೊಂಡಿದ್ದಾರೆ. ಅನಾರೋಗ್ಯದ ವಿರುದ್ಧ ಅವರು ಹೋರಾಡುತ್ತಿದ್ದರು. ಈ ಕಷ್ಟದ ಸಮಯದಲ್ಲಿ ಖಾಸಗಿತನವನ್ನು ಗೌರವಿಸಿ’ ಎಂದು ಕೋರಿದ್ದಾರೆ.
ಮೂಲಗಳ ಪ್ರಕಾರ ತಿಶಾ ಅವರು ಕ್ಯಾನ್ಸರ್ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರಂತೆ. ಅವರು ಅಲ್ಲಿಯೇ ನಿಧನ ಹೊಂದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಸಣ್ಣ ವಯಸ್ಸಿನಲ್ಲೇ ಅವರು ನಿಧನ ಹೊಂದಿದ್ದು ಕುಟುಂಬಕ್ಕೆ ಆಘಾತ ಉಂಟು ಮಾಡಿದೆ.
2003ರ ಸೆಪ್ಟೆಂಬರ್ 6ರಂದು ಜನಿಸಿ ತಿಶಾ ಅವರು ಕೃಷ್ಣ ಹಾಗೂ ತಾನ್ಯಾ ಸಿಂಗ್ ಮಗಳು. ದಂಪತಿಗೆ ಇರುವ ಏಕೈಕ ಮಗಳು ಇವರಾಗಿದ್ದರು. ಅವರ ಬಗ್ಗೆ ಹೊರ ಜಗತ್ತಿಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ತಿಶಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಟಿ-ಸೀರಿಸ್ ಸಿನಿಮಾ ಪ್ರದರ್ಶನಗಳ ವೇಳೆ ಕಾಣಿಸಿಕೊಂಡಿದ್ದರು.