ಚಿಕ್ಕೋಡಿ:- ಭಾರೀ ಮಳೆಯ ಕಾರಣ ಕೃಷ್ಣಾ ಹಾಗೂ ಘಟಪ್ರಭಾ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಸೇತುವೆಗಳು ಮುಳುಗಿ ರಸ್ತೆಗಳು ಜಲಾವೃತಗೊಂಡು ಹಲವಾರು ನಡುಗಡ್ಡೆಗಳು ಸಂಪರ್ಕ ಕಳೆದುಕೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ನಡುಗಡ್ಡೆಗಳಿಂದ ಗರ್ಭಿಣಿಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಕೃಷ್ಣಾ ನದಿಯಲ್ಲಿ ಮತ್ತೊಮ್ಮೆ ಪ್ರವಾಹದ ಪರಿಸ್ಥಿತಿ ಉದ್ಭವವಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಸುಕ್ಷೇತ್ರ ವೀರಭದ್ರ ದೇವಾಲಯ ಜಲಾವೃತಗೊಂಡಿದೆ. ರಾತ್ರಿ 11 ಗಂಟೆಗೆ ದೇವಸ್ಥಾ ಪ್ರಾಂಗಣದಲ್ಲಿ ಕೃಷ್ಣೆಯ ನೀರು ತುಂಬಿಕೊಂಡಿದೆ. ವೀರಭದ್ರ ಶಿವಲಿಂಗ ಜಲಾವೃತವಾಗಿದ್ದು, ಮೊಳಕಾಲು ಆಳದ ನೀರಿನಲ್ಲಿ ವೀರಭದ್ರ ದೇವರಿಗೆ ಮಂಗಳಾರತಿ ಮಾಡಲಾಯಿತು
ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿ ಇರುವ ಸುಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಕೃಷ್ಣಾ ನದಿಯ ನೀರು ತುಂಬಿರುವುದರಿಂದ ದೂರದಿಂದಲೇ ದರ್ಶನ ಪಡೆಯುತ್ತಿದ್ದಾರೆ
ಇನ್ನೂ ಕೃಷ್ಣಾ ನದಿಯ ಪ್ರವಾಹಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೃಷ್ಣಾ ನದಿಯ ಮಧ್ಯ ಭಾಗದಲ್ಲಿರುವ ನೀಲಕಂಠರಾಯನ ಗಡ್ಡಿ ನಡುಗಡ್ಡೆಯಾಗಿದೆ. ನಡುಗಡ್ಡೆಯಲ್ಲಿದ್ದ ಗರ್ಭಿಣಿಯರನ್ನು ಆಚೆ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ