ಮಂಡ್ಯ :- ಸ್ವಾತಂತ್ರ್ಯ ಪೂರ್ವಕ್ಕೆ ಮೊದಲೇ ದೇಶದಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿದ್ದು, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ ಬಣ್ಣಿಸಿದರು. ಮದ್ದೂರು ತಾಲೂಕಿನ ಆತಗೂರು ಗ್ರಾಮದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140 ನೇ ಜಯಂತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದಲ್ಲಿ ಅನೇಕ ರಾಜರು ಆಳ್ವಿಕೆ ಮಾಡಿದ್ದಾರೆ. ಆದರೆ ನಾಲ್ವಡಿ ಅವರು ಇಂದಿಗೂ ಅಚ್ಚಳಿಯದೆ ಉಳಿದಿದೆ ಎಂದರೆ ಅದಕ್ಕೆ ಕಾರಣ ಅವರು ಮಾಡಿದ ಜನಪರ ಕೆಲಸಗಳು ಎಂದರು. ದೇಶದಲ್ಲೇ ಮೊದಲು ಎಂಬಂತೆ ಹಿಂದುಳಿದವರಿಗೆ ಮೀಸಲಾತಿ ಜಾರಿ ಮಾಡಿದರು. ದೇವದಾಸಿ ಪದ್ಧತಿ, ಬಸವಿ ಬಿಡುವುದು, ಗೆಜ್ಜೆ ಪೂಜೆ ಆಚರಣೆ, ವೇಶ್ಯಾ ವೃತ್ತಿಗಳನ್ನು ನಿಷೇಧಿಸಿದರು. ವಿಧವಾ ಮರು ವಿವಾಹ ಪ್ರೋತ್ಸಾಹಕ್ಕೆ ಕಾಯ್ದೆ ರೂಪಿಸಿದರು. ಶೋಷಿತರಿಗೆ ಶಾಲೆ ತೆರೆದು ಕ್ರಾಂತಿಕಾರಕ ಯೋಜನೆಗಳ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದರು ಎಂದು ಹೇಳಿದರು.
ಮೈಸೂರು ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಡಿಪಾಯ ಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ ಹೆಚ್ಚಾಗಿದೆ. ಕೃಷಿ ಕ್ಷೇತ್ರದ ಪ್ರಗತಿ, ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆ ದೃಷ್ಟಿಯಿಂದ ಕೆ.ಆರ್.ಎಸ್ ಮತ್ತು ವಾಣಿ ವಿಲಾಸ ಅಣೆಕಟ್ಟೆಗಳನ್ನು ನಿರ್ಮಿಸಿದರು.
ಆದರೆ, ಸ್ವಾತಂತ್ರ್ಯ ನಂತರ ದೇಶದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಜೀವಿತಾವಧಿಯಲ್ಲಿ ಮಾಡಿದ ಕೆಲಸಗಳಲ್ಲಿ ಅರ್ಧದಷ್ಟು ಮಾಡಿಲ್ಲ. ಇನ್ನಾದರೂ ರಾಜಕಾರಣಿಗಳು ಐಶಾರಾಮಿ ಜೀವನವನ್ನು ಬದಿಗೊತ್ತಿ ಮಾನವೀಯತೆ, ಅಭಿವೃದ್ಧಿ ಮುನ್ನೋಟ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಸೋಮಶೇಖರ್, ತಾಲೂಕು ಅಧ್ಯಕ್ಷ ಆನಂದ್ ಮುಖಂಡರಾದ ಜೋಗಿ ನಿಂಗಯ್ಯ, ರಾಜಪ್ಪ, ರಾಮಣ್ಣ, ಶಿವರಾಜು, ಮರಿಯಪ್ಪ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ