ಬೆಂಗಳೂರು: ಕಳೆದ ವರ್ಷ ಬರದಿಂದ ಬೆಂದು ಹೋಗಿದ್ದ ರಾಜ್ಯಕ್ಕೆ ಈ ವರ್ಷ ಮಳೆರಾಯ ಕರುಣೆ ತೋರಿದ್ದಾನೆ. ಮುಂಗಾರು ಮಳೆ ಅಬ್ಬರದಿಂದಾಗಿ ರಾಜ್ಯದ ಜಲಾಶಯಗಳು ತುಂಬಿ ತುಳುಕುತ್ತಿವೆ. ಕಾವೇರಿ ನದಿ ಪಾತ್ರದ ಜಲಾಶಯಗಳು ಮೈದುಂಬಿಕೊಂಡಿದ್ದು, ಕಾವೇರಿ ಮಾತೆಗೆ ಬಾಗಿನ ಸಲ್ಲಿಕೆಗೆ ಸರ್ಕಾರ ತೀರ್ಮಾನಿಸಿದೆ.
ಇದೇ ಜುಲೈ 29ರಂದು ಕೆಆರ್ಎಸ್ ಹಾಗೂ ಕಬಿನಿ ಜಲಾಶಯಗಳಿಗೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ ಮಾಡಲಿದ್ದಾರೆ.
ಕಳೆದ ವರ್ಷ ಇಡೀ ರಾಜ್ಯವನ್ನು ಬರಗಾಲ ಕಾಡಿತ್ತು. ಇದರಿಂದ 2023ರಲ್ಲಿ ಕೆಆರ್ಎಸ್ ಕಟ್ಟೆ ಭರ್ತಿಯಾಗಿರಲಿಲ್ಲ. ಆದ್ರೆ ಈ ಬಾರಿ ಜತೆಗೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ನಿರಂತರವಾಗಿ ಕೆಆರ್ಎಸ್ ಹಾಗೂ ಕಬಿನಿ ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾಗಿದ್ದು,
ಜಲಾಶಯಗಳು ಭರ್ತಿಯಾಗಿವೆ. ಕಾವೇರಿ ನೀರಿಗಾಗಿ ಪ್ರತಿವರ್ಷ ತಮಿಳುನಾಡು ಮಾಡ್ತಿದ್ದ ಕಿರಿಕಿರಿ ಸದ್ಯಕ್ಕೆ ದೂರಾಗಿದೆ. ಅಲ್ಲದೇ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟಗಳು ಮತ್ತು ಅವುಗಳಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರೀರಂಗಪಟ್ಟಣದಿಂದ ಹೊಗೇನಕಲ್ವರೆಗೆ ಕಾವೇರಿ ತಟದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಹೇರಲಾಗಿದೆ.