ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಮತ್ತು ವೇತನ ಪರಿಷ್ಕರಣೆಗಾಗಿ, ರಾಜ್ಯರಸ್ತೆಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಾರ್ಚ್ 21ರಂದು ಕರೆ ನೀಡಿದ್ದ ಸಾರಿಗೆ ಮುಷ್ಕರವನ್ನು ( KSRTC Bus Strike ) ವಾಪಸ್ ಪಡೆದಿದೆ.
ಈ ಬಗ್ಗೆ ಸಾರಿಗೆ ನೌಕರರ ಮುಖಂಡ ಅನಂತ ಸುಬ್ಬರಾವ್ ಮಾತನಾಡಿ ಸಾರಿಗೆ ನೌಕರರ (KSRTC Employees) ಹಲವು ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿದೆ. ಮುಷ್ಕರ ಹಿಂಪಡೆಯಲು ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಮತ್ತೊಂದು ಸುತ್ತಿನ ಚರ್ಚೆ ನಡೆಸುತ್ತೇವೆ. ಸಾರಿಗೆ ನೌಕರರಿಗೆ ಯುಗಾದಿ ಗಿಫ್ಟ್ ನೀಡುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಸಾರಿಗೆನೌಕರರಬೇಡಿಕೆಗಳೇನು?
- ಮೂಲ ವೇತನಕ್ಕೆ ಬಿ.ಡಿ.ಎ ವಿಲೀನಗೊಳಿಸಿ, ಮೂಲ ವೇತಕ್ಕೆ ಶೇ. 25 ರಷ್ಟು ಹೆಚ್ಚಿಸಬೇಕು
- ವೇತನ ಹೆಚ್ಚಳವೂ ಪರಿಷ್ಕೃತ ಮೂಲ ವೇತನದ ಶೇ.3 ರಷ್ಟಿರಬೇಕು.
- ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಮೇಲಿನಂತೆಯೇ ಸಿದ್ದಪಡಿಸಬೇಕು
- ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾವಧಿಯ ಪ್ರತಿ 10 ವರ್ಷಕ್ಕೆ ನೀಡಬೇಕು.
- ಎಲ್ಲ ನೌಕರರಿಗೂ ಹಾಲಿ ಇರುವ ಬಾಟಾ ಮಾಸಿಕ, ದೈನಂದಿನ (ಕ್ಯಾಷ್,ರಿಪಾಸ್ಟ್ , ಬಟ್ಟೆ ತೊಳೆಯುವ, ರಾತ್ರಿ ಪಾಳಿ ಪ್ರೋತ್ಸಾಹ ಭತ್ಯೆ) ಭತ್ಯೆಗಳನ್ನು ಐದು ಪಟ್ಟು ಜಾಸ್ತಿ ಮಾಡಬೇಕು.
- ಹೊಲಿಗೆ ಭತ್ಯ, ಶೂ, ಜೆರ್ಸಿ, ರೈನ್ ಕೋಟ್ಗೆ ನೀಡುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು.
- ಎಲ್ಲ ನಿರ್ವಾಹಕರಿಗೂ ಕ್ಯಾಪಿಯರ್ಗಳಿಗೆ ಸಮಾನದ ನಗದು ಪ್ರೋತ್ಸಾಹಧನ ನೀಡಬೇಕು.
- 2021ರ ಏಪ್ರಿಲ್ನಲ್ಲಿ ಮುಷ್ಕರ ನಡೆಸಿದ ಸಂದರ್ಭದಲ್ಲಿ ಸವೆಯಿಂದ ವಜಾಗೊಳಿಸಿದ ನೌಕರರನ್ನು ಷರತ್ತಿಲ್ಲದೆ ಮರು ನೇಮಕ ಮಾಡಬೇಕು.
- ವರ್ಗಾವಣೆ ಶಿಕ್ಷೆಗೆ ಒಳಗಾದ ಸಿಬ್ಬಂದಿ, ನೌಕರರನ್ನು ಮೂಲ ಘಟಕಕ್ಕೆ ಮರು ನಿಯೋಜಿಸಬೇಕು.
- ಮುಷ್ಕರದ ವೇಳೆ ಎಫ್ಐಆರ್ ದಾಖಲಿಸಿರುವ ನೌಕರರನ್ನು ಕೆಲಸಕ್ಕೆ ವಾಪಸ್ ತೆಗೆದುಕೊಳ್ಳಬೇಕು.
- ಜಂಟಿ ಕ್ರಿಯಾ ಸಮಿತಿಯಿಂದ ಸಲ್ಲಿಸಿರುವ ಬೆಡಿಕೆಗಳನ್ನು ಆಡಳಿತ ವರ್ಗದವರು ಚರ್ಚಿಸಿ, ವಿಳಂಬವಿಲ್ಲದೆ ಈಡೇರಿಸಬೇಕು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ಮುಷ್ಕರ ಹೂಡುವುದಾಗಿ ಹೇಳಿದ್ದ ನೌಕರರ ಸಂಘ ಮುಷ್ಕರಕ್ಕೆ ಕರೆಯೂ ನೀಡಿತ್ತು. ಈ ನಡುವೆ ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950ರ ಸೆಕ್ಷನ್ 34/1ರ ಅನ್ವಯ ಸಾರಿಗೆ ನೌಕರರ ವೇತನ ಪರಿಷ್ಕರಿಸಿ ಮಾರ್ಚ್ 1 2023 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರೊಂದಿಗೆ ಕೆಲವೊಂದು ನಿಬಂಧನೆಗಳನ್ನು ಕೂಡ ಹಾಕಲಾಗಿತ್ತು. ನಾಲ್ಕು ಸಾರಿಗೆ ನಿಗಮಗಳ ಅಧಿಕಾರಿಗಳು, ನೌಕರರು, ಪೂರ್ವ ಕಿಂಕೋ ಅಧಿಕಾರಿಗಳು 31.12.2019 ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇ.15% ಹೆಚ್ಚಿಸಿ ಅದರಂತೆ ವೇತನ ಶ್ರೇಣಿಯನ್ನು ಪರಿಷ್ಕರಿಸಬೇಕು.
ಪೂರ್ವ ಕಿಂಕೋ ನೌಕರರೂ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಅರ್ಹ ನೌಕರರ ಉನ್ನತ ವೇತನ ಶ್ರೇಣಿಗಳನ್ನು ಮತ್ತು ಮಧ್ಯಂತರ (ಸೆಲೆಕ್ಷನ್ ಗ್ರೇಡ್) ವೇತನ ಶ್ರೇಣಿಗಳನ್ನು ಶೇ.15 ಹೆಚ್ಚಳ ಮಾಡಿ ಪರಿಷ್ಕರಿಸಬೇಕು. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಪುನಶ್ಚೇತನಕ್ಕಾಗಿ ರಚಿಸಿರುವ ಏಕಸದಸ್ಯ ಸಮಿತಿಯು 4 ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದರ ಜೊತೆಗೆ ಸರ್ಕಾರದಿಂದ ಎಷ್ಟು ಪ್ರಮಾಣದ ಅನುದಾನದ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಿ ಕಾರ್ಮಿಕ ಸಂಘಟನೆಗಳು ಸೇರಿದಂತೆ ಸಂಭಂದಪಟ್ಟವರೊಂದಿಗೆ ಚರ್ಚಿಸಿ ಯಾವ ದಿನಾಂಕದಿಂದ ವೇತನ ಮತ್ತಿತರ ಬಾಕಿಗಳನ್ನ ಪಾವತಿಸಬೇಕೆಂದು ಒಂದು ತಿಂಗಳ ಅವಧಿಯಲ್ಲಿ ತಿಳಿಸಿಬೇಕು ಎಂಬ ನಿಬಂಧನೆಯೊಂದಿಗೆ ವೇತನ ಪರಿಷ್ಕರಣೆ ಆದೇಶ ಹೊರಡಿಸಲಾಗಿತ್ತು.