ರಾಮನಗರ: ಕೇಂದ್ರ ಮಂತ್ರಿ ಕುಮಾರಸ್ವಾಮಿ ಅವರು ಡಿಸಿಗೆ ಧಮ್ಕಿ ಹಾಕುತ್ತಿದ್ದಾರೆ. ನಿಮ್ಮ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗರಂ ಆದರು. ಚನ್ನಪಟ್ಟಣ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಡಿಕೆಶಿ, ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಕಳೆದ ಮೂರು ತಿಂಗಳಿನಿಂದ ನಿಮ್ಮ ತಾಲೂಕಿನಲ್ಲಿ ಬದಲಾವಣೆ ಆಗ್ತಿದೆ.
ಚನ್ನಪಟ್ಟಣದ ಅಭಿವೃದ್ಧಿಯ ದೀಪ ಹಚ್ಚಿದ್ದೇವೆ. ಕೊಟ್ಟ ಮಾತಿನಂತೆ ಚನ್ನಪಟ್ಟಣ ಅಭಿವೃದ್ಧಿ ಮಾಡ್ತಿದ್ದೇವೆ. ಸಾಕಷ್ಟು ಮಂತ್ರಿಗಳು ಬಂದು ಸಭೆ ಮಾಡ್ತಿದ್ದಾರೆ. ಅಧಿಕಾರಿಗಳನ್ನ ನಿಮ್ಮ ಮನೆ ಬಾಗಿಲಿಗೆ ಕಳಿಸುತ್ತಿದ್ದೇವೆ. ಈ ಹಿಂದಿನ ಶಾಸಕರ ಬಗ್ಗೆ ನಾನು ಮಾತನಾಡಲ್ಲ. ನಮ್ಮ ಜಮೀರ್ಗೆ ಹಳೇ ಸ್ನೇಹಿತರು ಹಾಗಾಗಿ ಅವರನ್ನ ನೆನೆಸಿಕೊಂಡಿದ್ದಾರೆ. ಈಗ ಆವರಿಗೂ ಈ ಕ್ಷೇತ್ರಕ್ಕೂ ಸಂಬಂಧ ಇಲ್ಲ ಎಂದು ಹೆಚ್ಡಿಕೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಈ ಕ್ಷೇತ್ರಕ್ಕೂ ನಮಗೂ ಸಂಬಂಧ ಇದೆ. ಹಿಂದೆ ಇದೇ ಕ್ಷೇತ್ರದ ಒಂದು ಹೋಬಳಿಯಲ್ಲಿ ನಾನು ಸ್ಪರ್ಧಿಸುತ್ತಿದ್ದೆ. ನನಗೂ ನಿಮಗೂ ಭಕ್ತ ಹಾಗೂ ಭಗವಂತನ ಸಂಬಂಧ ಇದೆ. ಕ್ಷೇತ್ರದಲ್ಲಿ 7 ಎಕರೆಯಲ್ಲಿ ಸೈಟ್ ಮಾಡಿ ನಿವೇಶನ ಹಂಚುತ್ತಿದ್ದೇವೆ. ಸಾಕಷ್ಟು ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಡ್ತಿದ್ದೇವೆ. ಇದನ್ನ ನಾನು ಕುಮಾರಸ್ವಾಮಿ ಅವರಿಗೆ ಹೇಳ್ತಿದ್ದೇನೆ. ಪಾಪ ಕುಮಾರಣ್ಣ ಜಿಲ್ಲಾಧಿಕಾರಿಗೆ ಬೆದರಿಕೆ ಹಾಕಿದ್ದಾರಂತೆ.
ನಾವಿದ್ದಾಗ ಕೆಲಸ ಆಗಿಲ್ಲ, ಈಗ ಏನ್ಮಾಡ್ತಿದ್ದೀರಿ ಅಂತಾ. ಕುಮಾರಣ್ಣ ನಿನ್ನ ಗೊಡ್ಡು ಬೆದರಿಕೆಗೆ ಹೆದರಲ್ಲ. ಕುಮಾರಸ್ವಾಮಿ ನಿನ್ನ ಆಡಳಿತ ಸ್ವಾರ್ಥಕ್ಕೆ, ನನ್ನ ಆಡಳಿತ ಜನರಿಗೆ. ಇಲ್ಲಿ ಯಾರೂ ಕೂಡಾ ಶಾಶ್ವತ ಅಲ್ಲ. ಅಧಿಕಾರ ಬರುತ್ತೆ, ಹೋಗುತ್ತೆ. ಕುಮಾರಸ್ವಾಮಿ ಬಿಟ್ಟು ಸಾಕಷ್ಟು ಕೌನ್ಸಿಲರ್ಗಳು ಕಾಂಗ್ರೆಸ್ಗೆ ಬಂದಿದ್ದಾರೆ. ಈಗ ಕೌನ್ಸಿಲರ್ಗಳಿಗೂ ಕುಮಾರಸ್ವಾಮಿ ಬೆದರಿಕೆ ಹಾಕ್ತಿದ್ದಾರಂತೆ. ಆದರೆ ಅವರಿಗೆ ರಕ್ಷಣೆ ಕೊಡುವ ಜವಾಬ್ದಾರಿ ನಮ್ಮದು ಎಂದು ಡಿಕೆಶಿ ತಿಳಿಸಿದರು.