ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು?. ಬಹಳ ದಿನಗಳಿಂದ ಚರ್ಚೆಯಲ್ಲಿದ್ದ ವಿಷಯ ಈಗ ಸ್ಪಷ್ಟವಾಗಿದೆ. ಸ್ವರೂಪ್ ಹೆಚ್. ಪಿ. ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಈಗ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಲು ಪಕ್ಷದ ನಾಯಕರು ಮುಂದಾಗಿದ್ದಾರೆ.
ಮೇ 10ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾದ ಗುರುವಾರ ಜೆಡಿಎಸ್ ನಾಯಕರು ಇದಕ್ಕೆ ಮುಹೂರ್ತ ಇಟ್ಟಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ಹಾಸನಕ್ಕೆ ಭೇಟಿ ನೀಡಲಿದ್ದಾರೆ. ಸ್ವರೂಪ್ ಹೆಚ್. ಪಿ. ನಾಮಪತ್ರ ಸಲ್ಲಿಕೆ ಮಾಡುವಾಗ ಅವರ ಜೊತೆ ಇರಲಿದ್ದಾರೆ. ಈಗಾಗಲೇ ಸಾಂಕೇತಿವಾಗಿ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದು, ಗುರುವಾರ ಬೃಹತ್ ರೋಡ್ ಶೋ ಮೂಲಕ ಆಗಮಿಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.
ಏಪ್ರಿಲ್ 20ರ ಗುರುವಾರ ಹಾಸನ ನಗರದಲ್ಲಿ ನಡೆಯುವ ಬೃಹತ್ ರೋಡ್ ಶೋನಲ್ಲಿ ಎಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮಾಜಿ ಸಚಿವ ಎಚ್. ಡಿ. ರೇವಣ್ಣ, ಭವಾನಿ ರೇವಣ್ಣ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮುಂತಾದ ನಾಯಕರು ಭಾಗವಹಿಸಲಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ ಮಾಡಿ, ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡಲಿದ್ದಾರೆ. ಭವಾನಿ ರೇವಣ್ಣ ಆಕಾಂಕ್ಷಿಯಾಗಿದ್ದರು ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ಗಾಗಿ ದೊಡ್ಡ ಜಟಾಪಟಿಯೇ ನಡೆದಿತ್ತು. ಸದ್ಯ ಬಿಜೆಪಿ ವಶದಲ್ಲಿರುವ ಕ್ಷೇತ್ರದ ಶಾಸಕರು ಪ್ರೀತಮ್ ಗೌಡ. ಎಚ್. ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಈ ಬಾರಿಯ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಎಚ್.ಡಿ.ಕುಮಾರಸ್ವಾಮಿ ಹೆಚ್. ಪಿ. ಸ್ವರೂಪ್ ಪರವಾಗಿದ್ದರು. ಇದರಿಂದಾಗಿ ಹಾಸನದ ಅಭ್ಯರ್ಥಿ ಯಾರು? ಎಂಬುದು ರಾಜ್ಯಾದ್ಯಂತ ಚರ್ಚೆಯ ವಿಚಾರವಾಗಿತ್ತು.
ಸುಮಾರು ಎರಡು ತಿಂಗಳಿನಿಂದ ನಡೆದ ಚರ್ಚೆಗೆ ಎಚ್. ಡಿ. ಕುಮಾರಸ್ವಾಮಿ 2ನೇ ಪಟ್ಟಿ ಬಿಡುಗಡೆ ಮಾಡುವಾಗ ತೆರೆ ಎಳೆದಿದ್ದರು. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಎಚ್. ಡಿ. ರೇವಣ್ಣ ಜೊತೆಯಲ್ಲೇ ವೇದಿಕೆಯಲ್ಲಿ ಹಾಸನಕ್ಕೆ ಹೆಚ್. ಪಿ. ಸ್ವರೂಪ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಎಚ್. ಡಿ. ರೇವಣ್ಣ ಕುಟುಂಬದ ಜೊತೆ ಕೊನೆ ಕ್ಷಣದ ತನಕ ನಡೆಸಿದ ಹೋರಾಟ ಫಲಕೊಟ್ಟಿರಲಿಲ್ಲ.
2018ರ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಬಿಜೆಪಿಯ ಪ್ರೀತಮ್ ಗೌಡ 63,348 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್ ಅಭ್ಯರ್ಥಿ ಹೆಚ್. ಎಸ್. ಪ್ರಕಾಶ್ 50,342 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈ ಚುನಾವಣೆಯಲ್ಲಿ ಹೆಚ್. ಎಸ್. ಪ್ರಕಾಶ್ ಪುತ್ರ ಹೆಚ್. ಪಿ. ಸ್ವರೂಪ್ ಜೆಡಿಎಸ್ ಅಭ್ಯರ್ಥಿ. ಕಳೆದ ಚುನಾವಣೆಯಲ್ಲಿ ತಂದೆಯ ಸೋಲಿನ ಸೇಡನ್ನು ಈ ಬಾರಿ ಅವರು ತೀರಿಸಿಕೊಳ್ಳಲು ತಂತ್ರ ರೂಪಿಸಿದ್ದಾರೆ. ಅದಕ್ಕೆ ಬೆಂಬಲವಾಗಿ ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ರೇವಣ್ಣ ಕುಟುಂಬ ನಿಂತಿದೆ.
ಹಾಸನ ಕ್ಷೇತ್ರದಲ್ಲಿ 4 ಬಾರಿ ಗೆದ್ದಿದ್ದ ಹೆಚ್. ಎಸ್. ಪ್ರಕಾಶ್ ಕಳೆದ ಚುನಾವಣೆಯಲ್ಲಿ ಸೋಲುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿತ್ತು. ಸುಮಾರು 1999ರಲ್ಲಿ ಕೆ. ಎಚ್. ಹನುಮೇಗೌಡ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದು ಹಾಸನ ಕ್ಷೇತ್ರವನ್ನು ಪಕ್ಷಕ್ಕೆ ಗೆದ್ದುಕೊಟ್ಟಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರ ವಶಕ್ಕೆ ಪಡೆಯಬೇಕು ಎಂದು ಜೆಡಿಎಸ್ ನಾಯಕರು ಶಪಥ ಮಾಡಿದ್ದಾರೆ.
ಬಿಜೆಪಿ ಈಗಾಗಲೇ ಹಾಲಿ ಶಾಸಕ ಪ್ರೀತಮ್ ಗೌಡ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಜೊತೆ ಗುರುತಿಸಿಕೊಂಡು ಉಪ ಚುನಾವಣೆಗಳಲ್ಲಿ ಪಕ್ಷ ಗೆಲ್ಲಲು ರಣತಂತ್ರ ರೂಪಿಸಿರುವ ಪ್ರೀತಮ್ ಗೌಡ ಪಕ್ಷದ ಯುವ ನಾಯಕ. ಪ್ರೀತಮ್ ಗೌಡ ಮತ್ತು ಭವಾನಿ ರೇವಣ್ಣ ನಡುವೆ ನೇರ ಪೈಪೋಟಿ ನಡೆಯಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಟಿಕೆಟ್ ಹಂಚಿಕೆ ಜಟಾಪಟಿಯಲ್ಲಿ ಸ್ವರೂಪ್ ಹೆಚ್. ಪಿ. ಗೆದ್ದಿದ್ದಾರೆ.
ಹಾಸನ ಕ್ಷೇತ್ರದ ಚುನಾವಣಾ ಚಿತ್ರಣ ಅಂತಿಮವಾಗಿದೆ. ಬಿಜೆಪಿಯಿಂದ ಪ್ರೀತಮ್ ಗೌಡ, ಜೆಡಿಎಸ್ನಿಂದ ಸ್ವರೂಪ್ ಹೆಚ್. ಪಿ. ಮತ್ತು ಕಾಂಗ್ರೆಸ್ನಿಂದ ಬನವಾಸೆ ರಂಗಸ್ವಾಮಿ ಅಭ್ಯರ್ಥಿಗಳು. ಆದರೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ.