ಬೆಂಗಳೂರು: ಮಂಡ್ಯದಿಂದ ಕುಮಾರಸ್ವಾಮಿ ಅವರ ಸ್ಪರ್ಧೆ ಅಂತಿಮವಾಗಿದೆ. ಪಕ್ಷದ ವರಿಷ್ಠರೇ ಅಧಿಕೃತವಾಗಿ ಹೆಸರು ಘೋಷಣೆ ಮಾಡ್ತಾರೆ ಅಂತ ಕುಮಾರಸ್ವಾಮಿ ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಇಲ್ಲಿನ ಜೆಪಿ ನಗರ ನಿವಾಸದ ಬಳಿ ಮಾತನಾಡಿದ ಅವರು, ಕೋರ್ ಕಮಿಟಿ ಸಭೆಯಲ್ಲಿ ಮಂಡ್ಯ, ಕೋಲಾರ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿದೆ. ಮಂಡ್ಯಕ್ಕೆ ಕುಮಾರಸ್ವಾಮಿ ಅವರ ಹೆಸರೇ ಅಧಿಕೃತ ಆಗಿದೆ ಎಂದು ಹೇಳಿದ್ದಾರೆ.
ಮಂಡ್ಯದ ಜೆಡಿಎಸ್ ಕಾರ್ಯಕರ್ತರ, ನಾಯಕರ ಒತ್ತಾಸೆಗೆ ಬೆಲೆ ಕೊಟ್ಟು ಕುಮಾರಸ್ವಾಮಿ ಸ್ಪರ್ಧೆ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆಗೆ ಆದ ಅನ್ಯಾಯ ಸರಿಪಡಿಸಬೇಕು. ಕುಮಾರಸ್ವಾಮಿ ಅವರಿಗೆ ರಾಜ್ಯದ ಪರವಾಗಿ ಬದ್ದತೆ ಇದೆ. ರಾಜ್ಯದ ಪರವಾಗಿ ಕೆಲಸ ಮಾಡ್ತಾರೆ ಅಂತ ಬಿಜೆಪಿ ಹೈಕಮಾಂಡ್ ನಾಯಕರಿಗೂ ಅನ್ನಿಸಿದೆ. ಅಧಿಕೃತವಾಗಿ ಕುಮಾರಸ್ವಾಮಿ ಅವರು ಅಭ್ಯರ್ಥಿ ಆಗೋ ಬಗ್ಗೆ ವರಿಷ್ಠರು ಅಧಿಕೃತ ಘೋಷಣೆ ಮಾಡ್ತಾರೆ ಅಂತ ತಿಳಿಸಿದ್ದಾರೆ.
ಕೋಲಾರ ಅಭ್ಯರ್ಥಿ ವಿಚಾರವಾಗಿ, ಈಗಾಗಲೇ ದೇವೇಗೌಡರು ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ದೇವೇಗೌಡರ ನಿರ್ಧಾರವೇ ಅಂತಿಮ. ದೇವೇಗೌಡರು ಎಲ್ಲಾ ನಾಯಕರ ಭಾವನೆ ತಿಳಿದುಕೊಂಡು ನಿರ್ಧಾರ ಘೋಷಣೆ ಮಾಡಿರುತ್ತಾರೆ. ಮಲ್ಲೇಶ್ ಬಾಬು ಅವರ ಹೆಸರು ಘೋಷಣೆ ಮಾಡಿದ್ದಾರೆ. ಮಲ್ಲೇಶ್ ಬಾಬು ಮೃದು ಸ್ವಾಭಾವದ ವ್ಯಕ್ತಿ. ಪಕ್ಷಕ್ಕೆ ನಿಷ್ಠೆ ಇರುವ ವ್ಯಕ್ತಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದರು. ಮಲ್ಲೇಶ್ ಬಾಬು ಜೊತೆಗೆ ನಿಸರ್ಗ ನಾರಾಯಣಸ್ವಾಮಿ, ಸಂಮೃದ್ಧಿ ಮಂಜುನಾಥ್ ಕೂಡಾ ಆಕಾಂಕ್ಷಿ ಇದ್ದಾರೆ. ಕೋಲಾರದ ಮುಖಂಡರ ಸಭೆ ಮಾಡ್ತಿದ್ದೇನೆ. ಅಲ್ಲಿ ಚರ್ಚೆ ಮಾಡಿ ಇಂದೇ ಅಂತಿಮ ತೀರ್ಮಾನ ಮಾಡ್ತೀವಿ ಅಂತ ತಿಳಿಸಿದ್ದಾರೆ.