ಪೀಣ್ಯ ದಾಸರಹಳ್ಳಿ:’ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಲು ನಮ್ಮ ಕಾಲೇಜಿನಲ್ಲಿ ಅಂತರ ಶಾಲಾ ಮಟ್ಟದ ಕಬ್ಬಡಿ ಪಂದ್ಯಾವಳಿ ಹಮ್ಮಿಕೊಂಡಿದ್ದೇವೆ ಎಂದು ನಿತ್ಯ ಜ್ಯೋತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಟಿ.ಎಸ್. ಗಂಗರಾಜು ತಿಳಿಸಿದರು.
ಮಲ್ಲಸಂದ್ರದ ನಿತ್ಯ ಜ್ಯೋತಿ ಶಿಕ್ಷಣ ಸಂಸ್ಥೆಯ ಕುವೆಂಪು ಸ್ವತಂತ್ರ ಪದವಿ ಪೂರ್ವ ಕಾಲೇಜು ವತಿಯಿಂದ ಅಂತರ ಪ್ರೌಢಶಾಲೆಗಳ ಕಬ್ಬಡಿ ಪಂದ್ಯಾವಳಿ ‘ಕುವೆಂಪು ಕಬ್ಬಡಿ ಕಪ್- 2023 ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಮಾತನಾಡಿದರು.
ವಿವಿಧ ಶಾಲೆಯ 14 ತಂಡಗಳು ಭಾಗವಹಿಸಿ ಬೆಳಿಗ್ಗೆಯಿಂದ ಪಂದ್ಯಾವಳಿ ನಡೆದಿದೆ. ಈ ಕಬ್ಬಡಿ ಪಂದ್ಯಾವಳಿಯಲ್ಲಿ ಮಾಕಳಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಥಮ ಬಹುಮಾನ, ಹೆಸರಘಟ್ಟ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನ ಮತ್ತು ಚಿಕ್ಕಬಾಣಾವರ ಶಾಲಾ ವಿದ್ಯಾರ್ಥಿಗಳು ತೃತೀಯ ಬಹುಮಾನ ಪಡೆದಿದ್ದಾರೆ’ ಎಂದು ತಿಳಿಸಿದರು.
ಕುವೆಂಪು ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕುಮಾರ .ಟಿ ಮಾತನಾಡಿ’ ವಿದ್ಯಾರ್ಥಿಗಳಲ್ಲಿನ ಕ್ರೀಡಾ ಪ್ರತಿಭೆ ಪ್ರೋತ್ಸಾಹಿಸಲು ಮತ್ತು ಅವರಿಗೆ ಗ್ರಾಮೀಣ ಕ್ರೀಡೆಯ ಬಗ್ಗೆ ಉತ್ತೇಜನಗೊಳಿಸಲು ನಮ್ಮ ಕಾಲೇಜಿನಲ್ಲಿ ಅಂತರ ಶಾಲಾ ಕಬ್ಬಡಿ ಪಂದ್ಯಾವಳಿ ನಡೆಸುತ್ತಿದ್ದೇವೆ. ಬಾಲಕಿಯರಿಗೂ ಕೂಡ ಪಂದ್ಯಾವಳಿ ಇತ್ತು ಅದರಲ್ಲಿ ಮಾಕಳಿಯ ವಿಶ್ವೇಶ್ವರಯ್ಯ ಶಾಲೆ ಪ್ರಥಮ ಬಹುಮಾನ ಪಡೆದಿದೆ. ಇಲ್ಲಿ ವಿಜೇತರಾದವರಿಗೆ ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುತ್ತಿದೆ’ ಎಂದರು.