ಬೆಂಗಳೂರು: ಜೆಡಿಎಸ್ನವರೇ ನನ್ನನ್ನು ಪಕ್ಷದಿಂದ ಹೊರ ಹಾಕಿದ್ರು ಎಂಬ ಎ.ಟಿ.ರಾಮಸ್ವಾಮಿ ಹೇಳಿಕೆ ವಿಚಾರಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ಮಾತನಾಡಿದ ಅವರು, ನಾನು ಅವರನ್ನು ಹೊರಗೆ ಹಾಕಿಲ್ಲ. ಹಾಸನಕ್ಕೆ ಸಂಬಂಧಿಸಿದ ನಿರ್ಣಯ ನಾನು ಮಾಡಿಲ್ಲ. ಕಳೆದ ಎರಡು ವರ್ಷದ ರಾಜಕೀಯ ಹೇಗೆ ನಡೆದಿದೆ ಅಂತ ಸೂಕ್ಷ್ಮವಾಗಿ ಗಮನಿಸಿದ್ದೇನೆ. ರಾಮಸ್ವಾಮಿ ಹಾಗೇ ಹೇಳಿರಬೇಕು. ಗುಬ್ಬಿ ಶ್ರೀನಿವಾಸ್ ಕೂಡಾ ಅದೇ ಹೇಳಿದ್ದು ಅಲ್ಲವೇ?. ಘಟನೆಗೆ ಏನಾದರು ಕಾರಣ ಹೇಳಬೇಕು ಅದಕ್ಕೆ ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರಿಗೆ ಏನಾಗಿದೆ ಅಂತ ಗೊತ್ತಿದೆ” ಎಂದರು. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ವಿರುದ್ಧ ರಮ್ಯಾ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ ಅವರು, ”ಯಾರೇ ಸ್ಪರ್ಧೆ ಮಾಡಿದ್ರು ನನಗೇನು ಆತಂಕ ಇಲ್ಲ. ಯಾರು ಅಭ್ಯರ್ಥಿ ಆಗ್ತಾರೆ ಅನ್ನೋದು ನನಗೆ ಮುಖ್ಯ ಅಲ್ಲ. ಈಗಾಗಲೇ ನಾನು ಚನ್ನಪಟ್ಟಣದಿಂದ ನಿಲ್ಲಬೇಕು ಅಂತ ಆಗಿದೆ. ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ. ನಾನು ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ. ನಾನು ಚನ್ನಪಟ್ಟಣ ಬಿಟ್ಟು ಬೇರೆ ಕ್ಷೇತ್ರದಲ್ಲಿ ನಿಲ್ಲುವುದಿಲ್ಲ. ಒಂದು ಕ್ಷೇತ್ರದಲ್ಲಿ ಮಾತ್ರ ನಾನು ಸ್ವರ್ಧೆ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದರು.