ಕಷ್ಟವನ್ನು ಎದುರಿಸುತ್ತಾರೆ, ಖುಷಿಯನ್ನು ಹಂಚುತ್ತಾರೆ… ನೋವನ್ನು ನುಂಗುತ್ತಾರೆ, ದೇಶವನ್ನು ಕಟ್ಟುತ್ತಾರೆ… ಇವರು ಶ್ರಮಜೀವಿಗಳು. ನಿಜ, ಕಾರ್ಮಿಕರು ಇಲ್ಲದ ದೇಶವನ್ನು ಊಹಿಸಲು ಸಾಧ್ಯವೇ ಇಲ್ಲ. ಎಲ್ಲಾ ಸ್ಥರದಲ್ಲಿ ಕಾರ್ಮಿಕರು ಕಷ್ಟಪಟ್ಟು ದುಡಿಯುವುದರಿಂದ ಪ್ರತಿಯೊಂದು ದೇಶ, ರಾಜ್ಯಗಳು ಪ್ರಗತಿ ಕಾಣುತ್ತವೆ.
ಕಾರ್ಮಿಕರ ಶ್ರಮ, ತ್ಯಾಗದ ಮೇಲೆಯೇ ದೇಶದ ಅಭಿವೃದ್ಧಿಯಡಗಿದೆ.
ಇಂತಹ ಶ್ರಮಜೀವಿಗಳನ್ನು ನೆನೆಯುವ, ಗೌರವಿಸುವ ದಿನವಿದು. ಹೀಗಾಗಿ, ಈ ದಿನ ವರ್ಷವಿಡೀ ದುಡಿಯುವ ಕಾರ್ಮಿಕ ವರ್ಗಕ್ಕೆ ಮೀಸಲಾಗಿದೆ. ಕಾರ್ಮಿಕರ ಶ್ರಮ, ತ್ಯಾಗ, ಕಷ್ಟಗಳನ್ನು ಈ ದಿನ ಎಲ್ಲೆಡೆ ಸ್ಮರಿಸಲಾಗುತ್ತದೆ. ಬಹುತೇಕ ರಾಷ್ಟ್ರಗಳು ಇಂದು ಕಾರ್ಮಿಕರ ದಿನವನ್ನು ಆಚರಿಸುತ್ತವೆ. ಕಾರ್ಮಿಕರ ದಿನ, ಮೇ ಡೇ, ಲೇಬರ್ ಡೇ, ವರ್ಕರ್ಸ್ ಡೇ ಹೀಗೆ ನಾನಾ ಹೆಸರುಗಳಿಂದ ಈ ದಿನವನ್ನು ಕರೆಯಲಾಗುತ್ತದೆ.
ಮೊದಲಿಗೆ 1886ರಲ್ಲಿ ಅಮೇರಿಕಾದಲ್ಲಿ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ಭಾರತದಲ್ಲಿ ಈ ಆಚರಣೆ ಶುರುವಾಗಿದ್ದು 1923ರಲ್ಲಿ. ಅಂದು ಮದ್ರಾಸ್ ಅಂದರೆ ಇಂದಿನ ಚೆನ್ನೈನಲ್ಲಿ `ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್’ ಮೊದಲ ಬಾರಿಗೆ ಭಾರತದಲ್ಲಿ ಕಾರ್ಮಿಕರ ದಿನದ ಆಚರಣೆಗೆ ನಾಂದಿ ಹಾಡಿತ್ತು. ಸದ್ಯ ಭಾರತ ಸೇರಿದಂತೆ ನಾನಾ ದೇಶಗಳು ಮೇ ಒಂದರಂದು ಈ ಕಾರ್ಮಿಕರ ದಿನವನ್ನು ಆಚರಿಸುತ್ತವೆ. ಈ ಮೂಲಕ ಶ್ರಮಜೀವಿಗಳ ಸೇವೆಯನ್ನು ಸ್ಮರಿಸಲಾಗುತ್ತಿದೆ.
ಕಾರ್ಮಿಕರದಿನಾಚರಣೆಯಮಹತ್ವ:
ಮೇ ದಿನವು ಸಮಾಜಕ್ಕೆ ಮತ್ತು ಕಾರ್ಮಿಕರ ಕೊಡುಗೆ ಮತ್ತು ತ್ಯಾಗವನ್ನು ತಿಳಿಸಿಕೊಡುವ, ಅರಿವು ಮೂಡಿಸುವ ದಿನವಾಗಿದೆ. ಹಾಗೆಯೇ ಕಾರ್ಮಿಕರ ಕಾನೂನುಗಳು, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ, ಕೆಲಸದ ಅವಧಿ ಮೊದಲಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಸಲಾಗುತ್ತದೆ.
ಇಂದೇಮಹಾರಾಷ್ಟ್ರಮತ್ತುಗುಜರಾತ್ದಿನ:
ಹಿಂದಿನ ಬಾಂಬೆ ರಾಜ್ಯವನ್ನು ಭಾಷಾವಾರು ಆಧಾರದಲ್ಲಿ ವಿಂಗಡಿಸಿದ ನಂತರ 1960ರಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯದ ಸ್ಥಾನಮಾನ ಪಡೆದವು. ಆ ದಿನಾಂಕವನ್ನು ಗುರುತಿಸಲು ಮೇ 1 ಅನ್ನು ‘ಮಹಾರಾಷ್ಟ್ರ ದಿನ’ ಮತ್ತು ‘ಗುಜರಾತ್ ದಿನ’ ಎಂದು ಆಚರಿಸಲಾಗುತ್ತದೆ.