ಬೆಂಗಳೂರು:- ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಖಾಲಿ ಆಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷ ಖಾಲಿ ಆಗಲಿದ್ದು, ಆಗ ಕಾರ್ಯಕರ್ತರ ರಕ್ಷಣೆಗೆ ಯಾರೇ ನಾಯಕರು ಇರುವುದಿಲ್ಲ. ನಮ್ಮ ತತ್ವ, ಸಿದ್ಧಾಂತ ಒಪ್ಪಿಕೊಂಡು ಯಾರು ಬೇಕಾದರೂ ಕಾಂಗ್ರೆಸ್ ಸೇರ್ಪಡೆಯಾಗಬಹುದು. ಬಿಜೆಪಿಯಲ್ಲಿ ನಾಯಕರೇ ಇಲ್ಲ ಎಂದು ನಮ್ಮ ನಾಯಕತ್ವ ಹುಡುಕಿಕೊಂಡು ಪಕ್ಷಕ್ಕೆ ಬರಲಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿಜಯೇಂದ್ರ ಅವರಿಗೆ ಶುಭ ಹಾರೈಸುತ್ತೇನೆ. ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ಕಾಂಗ್ರೆಸ್ ಮೇಲೆ ಒಳ್ಳೆಯ ಪರಿಣಾಮವೇ ಆಗಲಿದೆ ಎಂದರು. ವಿಜಯೇಂದ್ರ ಅಧಿಕಾರ ಸ್ವೀಕಾರ ವೇಳೆ ಬಿಜೆಪಿ ಅಸಮಾಧಾನ ಬಹಿರಂಗವಾಗಿದೆ. ಸಿ.ಟಿ.ರವಿ, ಯತ್ನಾಳ್, ಸುನಿಲ್ ಕುಮಾರ್ ಸಮಾರಂಭಕ್ಕೆ ಗೈರಾಗಿದ್ದಾರೆ. ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ, ನಾಯಕತ್ವದ ಕೊರತೆ ಕಾರಣಕ್ಕೆ ಬಿಜೆಪಿ ವರಿಷ್ಠರು ವಿಜಯೇಂದ್ರ ಆಯ್ಕೆ ಮಾಡಿದ್ದಾರೆ ಎಂದರು.
ಕೇಂದ್ರ ಬಿಜೆಪಿಯು ಬಿ.ಎಸ್. ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲು ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕ ಮಾಡುವ ನಾಟಕ ಆಡಿದೆ. ಜತೆಗೆ ಬಿ.ಎಲ್. ಸಂತೋಷ್ ಅವರಿಗೆ ನೀವು ಕೇಶವ ಕೃಪಾದಲ್ಲೇ ಇರಿ ಎಂದು ಸ್ಪಷ್ಟ ಸಂದೇಶ ರವಾನಿಸಿದೆ’ ಎಂದು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದಾರೆ. ಅಲ್ಲದೆ, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆ ಮೇಲೆ ನಿಂತು ಓಲೈಕೆ ರಾಜಕಾರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣವನ್ನು ಒಪ್ಪುವುದಿಲ್ಲ ಎಂಬ ಮಾತು ಏನಾಯಿತು? ಬಿ.ವೈ. ವಿಜಯೇಂದ್ರ ನೇಮಕದ ಮೂಲಕ ಮೋದಿ ಅವರು ತಮ್ಮ ಮಾತಿನ ಮೇಲೆ ತಾವೇ ನಿಲ್ಲುವುದಿಲ್ಲ ಎಂದು ಸಾಬೀತು ಮಾಡಿದಂತಾಯಿತಲ್ಲವೇ?’ ಎಂದು ಕಿಡಿಕಾರಿದ್ದಾರೆ.